ವರ್ಲ್ಡ್ ಎಕನಾಮಿಕ್ ಫೋರಂನೊಂದಿಗೆ ಒಪ್ಪಂದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಉತ್ಸಾಹ

Update: 2020-01-20 16:22 GMT
Photo: Twitter

ದಾವೋಸ್(ಸ್ವಿಟ್ಜರ್‌ಲ್ಯಾಂಡ್), ಜ.20: ರಾಜ್ಯದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭಿಸಲು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಹೂಡಿಕೆದಾರರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿದ್ದಾರೆ.

ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಕರ್ನಾಟಕ ಪೆವಿಲಿಯನ್ ಉದ್ಘಾಟನೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊರಾಟ್ ಸಾನ್ಮೆಝ್ ಮಾತನಾಡಿ, ವ್ಯಾಪಾರ ವಹಿವಾಟಿನಲ್ಲಿ ನೈತಿಕತೆಯು ಕಡಿಮೆಯಾಗುತ್ತಿರುವ ಕುರಿತು ಹೂಡಿಕೆದಾರರು ಕಳವಳ ಹೊಂದಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ಸರಕಾರಗಳು ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಅನ್ನು ಪ್ರಾರಂಭಿಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಯಲು ಈ ಕೇಂದ್ರ ಸಹಕಾರಿ ಎಂದು ವಿವರಿಸಿದ ಅವರು, ಕರ್ನಾಟಕ ರಾಜ್ಯವು ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸುವುದಾದರೆ, ಈ ಕೇಂದ್ರವನ್ನು ಕೂಡಲೇ ಸ್ಥಾಪಿಸುವಂತೆ ಸಲಹೆ ನೀಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ,ಈ ಕೇಂದ್ರವನ್ನು ಸ್ಥಾಪಿಸುವ ಭರವಸೆ ನೀಡಿದರು.

ನಂತರ ಕರ್ನಾಟಕ ಪೆವಿಲಿಯನ್ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಸುಲಲಿತ ವಹಿವಾಟು ನಡೆಸಲು ಸರಕಾರ ಹೂಡಿಕೆದಾರರಿಗೆ ಎಲ್ಲ ರೀತಿಯ ಬೆಂಬಲ ನೀಡಲಿದೆ. ಅಭಿವೃದ್ಧಿಯ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲು ರಾಜ್ಯ ಸರಕಾರ ಉತ್ಸುಕವಾಗಿದ್ದು, ಜಾಗತಿಕ ಮಟ್ಟದಲ್ಲಿ ಕರ್ನಾಟಕ ಮುಂಚೂಣಿಗೆ ಬರಲು ನೆರವಾಗುವ ಅಧ್ಯಯನಗಳನ್ನು ಕೈಗೊಳ್ಳಲು ಆಸಕ್ತಿ ವಹಿಸಿದೆ ಎಂದು ತಿಳಿಸಿದರು.

ಸುಸ್ಥಿರ ಕೈಗಾರಿಕೆಗಳನ್ನು ರೂಪಿಸುವ ಮೂಲಕ ಕರ್ನಾಟಕ ರಾಜ್ಯವು ವರ್ಲ್ಡ್ ಎಕನಾಮಿಲ್ ಫೋರಂ 2020ರ ಗುರಿ ಸಾಧನೆಗೆ ಸಕ್ರಿಯವಾಗಿ ಶ್ರಮಿಸಲಿದೆ. ಭಾರತದ ಪ್ರಮುಖ ಕೈಗಾರಿಕಾ ರಾಜ್ಯವಾಗಿ ಹೊರಹೊಮ್ಮುವ ಮೂಲಕ ಜಾಗತಿಕ ಮಟ್ಟದಲ್ಲಿಯೂ ಕೈಗಾರಿಕೆಗಳ ಅಭಿವದ್ಧಿಯಲ್ಲಿ ರಾಜ್ಯ ಪ್ರಮುಖ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಭಾರತ ಮತ್ತು ಏಷ್ಯಾ ಅಜೆಂಡಾದ ಪ್ರಾದೇಶಿಕ ಮುಖ್ಯಸ್ಥ ವಿರಾಜ್ ಮೆಹ್ತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News