ಬಿಜೆಪಿ, ಜೆಡಿಎಸ್ ಒಳ ಒಪ್ಪಂದದಿಂದ ಕಾಂಗ್ರೆಸ್‍ಗೆ ಸೋಲು: ಸಿದ್ದರಾಮಯ್ಯ

Update: 2020-01-20 17:37 GMT

ಮೈಸೂರು,ಜ.20: ಕಳೆದ ಬಾರಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೋಲುಂಟಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ಮೈಸೂರು ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿದ್ದ ಹುಣಸೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಹಕರಿಸಿದ ಉಸ್ತುವಾರಿಗಳಿಗೆ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದದಿಂದ ಸೋಲಬೇಕಾಯಿತು. ಈಗ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯವರು ಹರಿಸಿದ ಹಣದ ಹೊಳೆಯಿಂದ ಸೋಲಬೇಕಾಯಿತು ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಹಲವು ಜನಪರ ಕಾರ್ಯಕ್ರಮಗಳನ್ನು ನೀಡಿದ್ದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ನನ್ನ ಮತ್ತು ಪಕ್ಷದ ವಿರುದ್ಧ ಅಪಪ್ರಚಾರ ಮಾಡಿ ಸೋಲಿಸಿದರು. ಇದರಿಂದಾಗಿ ನಮ್ಮ ಸಾಧನೆಗಳು ಹಿಂದಕ್ಕುಳಿದು ಅವರ ಅಪಪ್ರಚಾರ ಮೇಲುಗೈ ಸಾಧಿಸಿತು ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಬಿಜೆಪಿ, ಜೆಡಿಎಸ್ ನವರಿಗೆ ಉಳಿಗಾಲವಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ಸೋಲಿಸಿದರು. ಗ್ರಾಮ ಪಂಚಾಯತ್ ನಲ್ಲೂ ಗೆಲ್ಲಲು ಆಗದಿದ್ದ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಿಸಿ ಪರೋಕ್ಷವಾಗಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿತು. ಹಾಗಾಗಿ ನಾನು ಸೋಲಬೇಕಾಯಿತು ಎಂದು ವಿಶ್ಲೇಷಿಸಿದರು.

ಈಗ ನಡೆದ ಉಪಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲೂ 60 ಕೋಟಿಯಿಂದ 100 ಕೋಟಿ ರೂ.ಗಳಷ್ಟು ಬಿಜೆಪಿಯವರು ಖರ್ಚು ಮಾಡಿದ್ದಾರೆ. ಪ್ರತಿ ಓಟಿಗೆ ಮೂರು ಸಾವಿರದಿಂದ ಐದು ಸಾವಿರ ನೀಡಿದ್ದಾರೆ. ಪ್ರತಿ ಮನೆಗೆ 25ರಿಂದ 30 ಸಾವಿರ ರೂ.ಗಳನ್ನು ನೀಡಿದ್ದಾರೆ. ಇವರು ಅಭಿವೃದ್ಧಿಯ ಹೆಸರೇಳಿ ಗೆಲ್ಲಲು ಆಗದೆ ಹಣದಿಂದ ಗೆದ್ದಿದ್ದಾರೆ ಎಂದು ಕಿಡಿಕಾರಿದರು.

ನಾನು ಜೆಡಿಎಸ್ ಬಿಟ್ಟಾಗ 2006 ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಪ್ರಾರಂಭವಾದ ಹಣದ ಹೊಳೆ ಈಗ ಸಾಕಷ್ಟು ಸಂಖ್ಯೆಯಲ್ಲಿ ಜಾಸ್ತಿಯಾಗಿದೆ. ಈಗ ಉಪಚುನಾವಣೆಯಲ್ಲಿ ಬಿಜೆಪಿಯವರು ಖರ್ಚು ಮಾಡಿರುವುದನ್ನು ನೋಡಿದರೆ ನಮಗೆ ಭಯ ಆಗುತ್ತದೆ. ಒಂದು ರೀತಿಯಲ್ಲಿ ನಾವೇ ಜನರನ್ನು ಭ್ರಷ್ಟರನ್ನಾಗಿ ಮಾಡಿರುವುದು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟ ಕಾರ್ಯಕ್ರಮಗಳು ಈಗ ಜನರಿಗೆ ಮನವರಿಕೆಯಾಗುತ್ತಿದ. ನನ್ನ ಅವಧಿಯಲ್ಲಿ ನೀಡಿದ, ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ಎಸ್ಸಿ ಎಸ್ಟಿಗಳಿಗೆ ಗುತ್ತಿಗೆಯಲ್ಲಿ 50 ಲಕ್ಷ ರೂ ವರೆಗೆ ಮೀಸಲಾತಿ, ಇಂದಿರಾ ಕ್ಯಾಂಟಿನ್, ಮನಸ್ವಿನಿ, ಆರೋಗ್ಯ ಸಿರಿ, ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಲಾಯಿತು. ಎಸ್ಸಿ, ಎಸ್ಟಿ ಜನಾಂಗದವರಿಗೆ ಬಜೆಟ್‍ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡಬೇಕು ಎಂಬ ಕಾನೂನನ್ನು ದೇಶದ ಇತಿಹಾಸದಲ್ಲಿ ತೆಲಂಗಾಣ ಬಿಟ್ಟರೆ ಕರ್ನಾಟಕದಲ್ಲಿ ಜಾರಿಗೆ ತರಲಾಯಿತು. ಆ ಕೆಲಸವನ್ನು ದೇಶದಲ್ಲಿ ನರೇಂದ್ರ ಮೋದಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಿ ಅಪಪ್ರಚಾರ ಮಾಡಲಾಯಿತು. ಸಿದ್ದರಾಮಯ್ಯ ಲಿಂಗಾಯಿತ ಧರ್ಮ ಹೊಡೆದ, ಸದಾಶಿವ ಆಯೋಗದ ವರದಿ ಜಾರಿ ಮಾಡದೆ ಎಡಗೈ ನವರಿಗೆ ಅನ್ಯಾಯ ಮಾಡಿದ ಎಂದೆಲ್ಲ ಅಪಪ್ರಚಾರಗಳು ನಡೆದವು. ಇದೆಲ್ಲಾ ಸುಳ್ಳು ಎಂದು ಹೇಳುವಲ್ಲಿ ಮತ್ತು ನನ್ನ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡುವಲ್ಲಿ ನಮ್ಮ ಕಾರ್ಯಕರ್ತರು ವಿಫಲರಾದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹುಣಸೂರು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಶಾಸಕ ಎಚ್.ಪಿ.ಮಂಜುನಾಥ್ ಅವರನ್ನು ಮೈಸೂರು ಪೇಟಾ, ರೇಷ್ಮೆ ಶಾಲು, ಗಂಧದ ಹಾರ ಹಾಕಿ ಅಭಿನಂದಿಸಲಾಯಿತು. 

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಯು.ಟಿ.ಖಾದರ್, ಮಾಜಿ ಸಂಸದ ಆರ್.ಧ್ರುವನಾರಾಯಣ್, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕರುಗಳಾದ ಎಂ.ಕೆ.ಸೋಮಶೇಖರ್, ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಡಿ.ರವಿಶಂಕರ್, ಮಂಜುಳಾ ಮಾನಸ, ಸುನೀಲ್ ಬೋಸ್, ಶಿವು, ಹೆಡತಲೆ ಮಂಜುನಾಥ್, ಅಕ್ಬರ್ ಅಲೀಂ, ಕೆ.ಮರಿಗೌಡ, ಉಪಮೇಯರ್ ಸಿ.ಶ್ರೀಧರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News