ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನದ ಬರ, ಆತಂಕ !

Update: 2020-01-20 17:46 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.20: ಕಲಬುರಗಿಯಲ್ಲಿ ಫೆ.5 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನದ ಬರ ಉಂಟಾಗುವ ಆತಂಕ ಶುರುವಾಗಿದೆ.

ಸಮ್ಮೇಳನಕ್ಕೆ ಇನ್ನು ಎರಡು ವಾರಗಳಷ್ಟೇ ಬಾಕಿಯಿದೆ. ಆದರೆ, ಇದುವರೆಗೂ ಸರಕಾರ ಒಂದು ರೂ. ಅನುದಾನ ನೀಡಿಲ್ಲ. ಸರಕಾರದ ಈ ಧೋರಣೆಗೆ ಸಾಹಿತ್ಯ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ನಡುವೆ, ಮುಖ್ಯಮಂತ್ರಿಯು ಸಮ್ಮೇಳನಕ್ಕೆ ಅನುದಾನ ನೀಡುವಂತೆ ಹಣಕಾಸು ಇಲಾಖೆಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸಮ್ಮೇಳನಕ್ಕೆ 14 ಕೋಟಿ ಖರ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಈ ನಡುವೆ ನೆರವು ನೀಡುವಂತೆ ಜಿಲ್ಲಾಧಿಕಾರಿ ಬಿ.ಶರತ್ ಸಲ್ಲಿಸಿರುವ ಪ್ರಸ್ತಾವನೆಗೆ ಸರಕಾರದಿಂದ ಸರಿಯಾದ ಸ್ಪಂದನೆಯೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಅನುದಾನ ಬರದಿದ್ದರೂ, ವೇದಿಕೆ ನಿರ್ಮಾಣ ಸೇರಿ ವಿವಿಧ ಸಿದ್ಧತೆಗಳು ಬರದಿಂದ ಸಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ ಸಮ್ಮೇಳನಕ್ಕೆ ಐದು ಲಕ್ಷ ರೂ.ಗಳು ನೀಡಲಾಗಿದೆ. ಆದರೂ, ಸದ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಕೈಯಲ್ಲಿ ಹಣವಿಲ್ಲದೆ ಸಿದ್ಧತೆಗಳು ಹಿನ್ನೆಡೆಯಾಗತೊಡಗಿವೆ.

ಕನ್ನಡ ಸಾಹಿತ್ಯ ಲೋಕಕ್ಕೆ ಮೊದಲ ಗ್ರಂಥ ಕವಿರಾಜ ಮಾರ್ಗ ನೀಡಿದ ಕಲಬುರಗಿ ನೆಲದಲ್ಲಿ ಬರೋಬ್ಬರಿ 33 ವರ್ಷಗಳ ಬಳಿಕ ನಡೆಯುತ್ತಿರುವ ಅಕ್ಷರ ಜಾತ್ರೆಗೆ ಇಲ್ಲಿನ ವಿಶ್ವವಿದ್ಯಾಲಯದ ಆವರಣದಲ್ಲಿ ಸಕಲ ಸಿದ್ಧತೆ ನಡೆದಿದೆ. ಇದು ಮತ್ತಷ್ಟು ವೇಗ ಪಡೆದುಕೊಂಡು, ಸುಗಮವಾಗಿ ನಡೆಯಲು ಸರಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕಿದೆ ಎಂದು ಸಾಹಿತಿಗಳು, ಸಾಹಿತ್ಯಾಸಕ್ತರು ಒತ್ತಾಯಿಸಿದ್ದಾರೆ.

ಶಾಸಕರಿಂದಲೂ ದೇಣಿಗೆ: ನುಡಿಜಾತ್ರೆಗೆ ಒಂದು ತಿಂಗಳ ಗೌರವಧನ ನೀಡುವುದಾಗಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮೂಡ, ತಿಪ್ಪಣ್ಣಮ್ಮ ಕಮಕನೂರ, ಬಿ.ಜಿ.ಪಾಟೀಲ್, ಎಂ.ವೈ.ಪಾಟೀಲ್, ಕನೀಜ್ ಫಾತಿಮಾ, ಡಾ.ಅವಿನಾಶ ಜಾಧವ್ ಘೋಷಣೆ ಮಾಡಿದ್ದಾರೆ. ಸಮ್ಮೇಳನದಲ್ಲಿ ಕೆಲಸ ಮಾಡುವವರಿಗೆ 4 ಸಾವಿರ ಟಿ-ಶರ್ಟ್ ನೀಡಲು ಎಸ್.ಬಿ.ಪಾಟೀಲ್ ಗ್ರೂಪ್ ಅಧ್ಯಕ್ಷ ಎಂಎಲ್‌ಸಿ ಬಿ.ಜಿ.ಪಾಟೀಲ್ ಮುಂದಾಗಿದ್ದಾರೆ.

ನುಡಿಜಾತ್ರೆಗೆ ಸುಮಾರು 14 ಕೋಟಿ ಖರ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಇನ್ನೇನು ಹಣ ಬಿಡುಗಡೆಯಾಗುವುದಷ್ಟೇ ಬಾಕಿಯಿದೆ. ಸರಕಾರ ಶೀಘ್ರದಲ್ಲಿಯೇ ಹಣ ನೀಡಲಿದೆ. ಈಗಾಗಲೇ ಕಸಾಪ 5 ಲಕ್ಷ ನೀಡಿದೆ, 2.87 ಲಕ್ಷ ದೇಣಿಗೆ ಸಂಗ್ರಹವಾಗಿದೆ.

-ಬಿ.ಶರತ್, ಕಲಬುರಗಿ ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News