'ಕರೋನ ವೈರಸ್' ಆತಂಕ: ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮ, ಪ್ರಯಾಣಿಕರ ತಪಾಸಣೆ
ಬೆಂಗಳೂರು, ಜ.20: ಚೈನಾ ಸೇರಿ ‘ಕರೋನಾ ವೈರಸ್’ ವರದಿಯಾದ ದೇಶಗಳಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ವಿಚಕ್ಷಣಾ ದಳ ನಿಯೋಜಿಸುವ ಮೂಲಕ ಅಂತಹ ದೇಶಗಳಿಂದ ಆಗಮಿಸುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಜಿ.ಪ್ರಕಾಶ್ ಕುಮಾರ್ ಹೇಳಿದ್ದಾರೆ.
ಸಾಮಾನ್ಯವಾಗಿ ಶಂಕಿತ ರೋಗಿಗಳಿಗೆ ತೀವ್ರ ಜ್ವರ, ತಲೆನೋವು, ಮೈಕೈ ನೋವು, ಮೂಗು ಸೋರುವಿಕೆ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದಲ್ಲಿ ನ್ಯುಮೋನಿಯಾ ಮತ್ತು ಕೆಲ ಸಂದರ್ಭದಲ್ಲಿ ಸಾವು ಸಂಭವಿಸುವ ಸಾಧ್ಯತೆಯಿದೆ.
ಒಂಟೆ, ಬಾವಲಿ ಹಾಗೂ ಬೆಕ್ಕುಗಳು ಈ ಕರೋನ ವೈರಸ್ ವಾಹಕಗಳಾಗಿದ್ದು, ಇವುಗಳ ಜತೆಗೆ ಮನುಷ್ಯರ ಸಂಪರ್ಕ ಬೆಳೆದಾಗ ಕರೋನ ವೈರಸ್ ಹರಡುತ್ತದೆ ಎಂದು ಹೇಳಲಾಗಿದೆ.