ರೋಹಿಂಗ್ಯಾ ಮುಸ್ಲಿಮರಿಗೆ ಏಕೆ ಪೌರತ್ವ ನೀಡುವುದಿಲ್ಲ?: ಸಿದ್ದರಾಮಯ್ಯ

Update: 2020-01-20 18:15 GMT

ಮೈಸೂರು: ಬಿಜೆಪಿಯವರಿಗೆ ಕೋಪ ಇರುವುದು ಸಂವಿಧಾನದ ಮೇಲೆ. ಹಾಗಾಗಿ ಅವರು ಸಂವಿಧಾನಕ್ಕೆ ವಿರುದ್ಧವಾದ ಪೌರತ್ವ ತಿದ್ದುಪಡಿ, ಎನ್‍ಆರ್‍ಸಿ ಮತ್ತು ಎನ್‍ಪಿಎ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ಮೈಸೂರು ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿದ್ದ ಹುಣಸೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಹಕರಿಸಿದ ಉಸ್ತುವಾರಿಗಳಿಗೆ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಅವರಿಗೆ ಸಂವಿಧಾನದ ಮೇಲೆ ಕೋಪ ಇದೆ. ಹಾಗಾಗಿ ಪದೇ ಪದೇ ಬಿಜೆಪಿ ಸಚಿವರು, ಶಾಸಕರು, ಸಂಸದರು ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾರೆ. ಜೊತೆಗೆ ಸಂವಿಧಾನ ಬದಲಾಗಬೇಕು ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಲೋಕಸಭೆಯಲ್ಲಿ ಸಂವಿಧಾನ ಮಂಡನೆ ಮಾಡಬೇಕಾದರೆ ಇದೇ ಜನಸಂಘ ವಿರೋಧಿಸಿತ್ತು. ಅವರಿಗೆ ಸಮಾನತೆಯ ಸಂವಿಧಾನ ಬೇಕಿರಲಿಲ್ಲ, ಮನುವಾದದ ಸಂವಿಧಾನ ಬೇಕಿತ್ತು. ಅದಕ್ಕೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಈಗ ಸಂವಿಧಾನಕ್ಕೆ ವಿರುದ್ಧವಾದ ಕಾನೂನುಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಕಿಡಿಕಾರಿದರು. ಅಂಬೇಡ್ಕರ್ ಅವರು ಉತ್ತಮ ಸಂವಿಧಾನ ಮಂಡನೆ ಮಾಡದಿದ್ದರೆ ದೇಶ ಹಾಳಾಗುತ್ತಿತ್ತು. ಜೊತೆಗೆ ನಾವು ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ನಾನು ಹುಟ್ಟಿದ್ದ ದಿನಾಂಕವೇ ಗೊತ್ತಿಲ್ಲ, ನನ್ನ ದಾಖಲೆ ಕೊಡು ಎಂದರೆ ಎಲ್ಲಿಂದ ಕೊಡುವುದು, ನಮ್ಮ ತಂದೆ, ತಾಯಿ ಹುಟ್ಟಿದ್ದಕ್ಕೆ ದಾಖಲೆ ಕೊಡಲು ಸಾಧ್ಯವೇ. ನಾವು ಮನೆಯಲ್ಲೇ ಜನಸಿದ್ದು, ಹಾಗಿದ್ದ ಮೇಲೆ ಇವರಿಗೆ ಯಾವ ದಾಖಲೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸಿಎಎ ಎನ್‍ಆರ್‍ಸಿ ಯಿಂದ ಮುಸ್ಲಿಮರಿಗಷ್ಟೇ ತೊಂದರೆಯಲ್ಲ, ಈ ದೇಶ ಮೂಲನಿವಾಸಿಗಳು, ದಲಿತರು, ಆದಿವಾಸಿಗಳು, ದ್ರಾವಿಡರಿಗೆ ತೊಂದರೆ ಇದೆ ಎಂದು ಹೇಳಿದರು.

ಧರ್ಮದ ಆಧಾರದಲ್ಲಿ ಕಾನೂನು ರಚನೆಯಾದರೆ ದೇಶ ಹಾಳಾಗುತ್ತದೆ. ಇವರು ಪಾಕಿಸ್ತಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶ ದಿಂದ ಬಂದ ಹಿಂದೂಗಳಿಗೆ ಪೌರತ್ವ ನೀಡುವುದಾಗಿ ಹೇಳಿದ್ದಾರೆ. ಅಲ್ಲಿಂದ ಬಂದ ಮುಸ್ಲಿಮರಿಗೆ ಏಕೆ ಪೌರತ್ವ ನೀಡುವುದಿಲ್ಲ, ಹಾಗೆ ಶ್ರೀಲಂಕಾದಿಂದ ಬಂದ ತಮಿಳರು, ಮ್ಯಾನ್ಮಾರ್ ನಿಂದ ಬಂದ ರೋಹಿಂಗ್ಯಾ ಮುಸ್ಲಿಮರಿಗೆ ಏಕೆ ಪೌರತ್ವ ನೀಡುವುದಿಲ್ಲ ಎಂದು ಪ್ರಶ್ನಿಸಿದರು.

ವಲಸೆ ಹೋಗುವುದು ನಾಗರೀಕತೆ ಹುಟ್ಟಿದಾಗಿನಿಂದಲೂ ಬಂದಿದೆ. ಅಮೇರಿಕಾದಲ್ಲಿ ನಮ್ಮ ದೇಶದವರಿಗೆ ಪೌರತ್ವ ನೀಡಿಲ್ಲವೆ, ಹಾಗಾಗಿ ಧರ್ಮದ ಆಧಾರದಲ್ಲಿ ಕಾನೂನು ರಚನೆ ಮಾಡುವುದು ಅಪಾಯಕಾರಿ ಎಂದು ಹೇಳಿದರು.

ಈ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ, ಸಾಮರಸ್ಯ, ಬಹುತ್ವ ಉಳಿಯಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಹಾಗಾಗಿ ನಮ್ಮ ಕಾರ್ಯಕರ್ತರು ಸಿಎಎ, ಎನ್‍ಆರ್‍ಸಿ ಸಂವಿಧಾನಕ್ಕೆ ವಿರುದ್ಧವಾದ ಕಾನೂನು ಎಂದು ಜನರಿಗೆ ತಿಳಿಸಬೇಕಿದೆ ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News