ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗೆ ಪರೀಕ್ಷಾ ಮಂಡಳಿ ತಯಾರಿ: ಸಚಿವ ಸುರೇಶ್ ಕುಮಾರ್

Update: 2020-01-20 18:27 GMT

ಬೆಂಗಳೂರು, ಜ.20: ಪ್ರಸಕ್ತ ವರ್ಷದ ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಲ್ಲ ರೀತಿಯ ಸಿದ್ಧತೆಯನ್ನು ಕೈಗೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಸೋಮವಾರ ನಗರದ ಪರೀಕ್ಷಾ ಮಂಡಳಿಯಲ್ಲಿ ಸಿದ್ಧತೆ ಪರಿಶೀಲನಾ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡಳಿಯು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ, ಅಕ್ರಮಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ 2879 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ 14,735 ಶಾಲೆಗಳ 8,48,192 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಈಗಾಗಲೇ ಅರ್ಹ ಅಭ್ಯರ್ಥಿಗಳ ಕರಡು ಪ್ರವೇಶಪತ್ರಗಳನ್ನು ಶಾಲಾ ಲಾಗಿನ್‌ಗಳಿಗೆ ನೀಡಲಾಗಿದೆ. ಅದರಲ್ಲಿ ಇದುವರೆಗೂ 1 ಲಕ್ಷಕ್ಕೂ ಅಧಿಕ ತಿದ್ದುಪಡಿಗಳು ಶಾಲಾ ಹಂತದಲ್ಲಿ ಮಾಡಲಾಗಿದೆ. ಅಂತಿಮ ಪ್ರವೇಶ ಪತ್ರಗಳನ್ನು ಫೆಬ್ರವರಿ ಎರಡನೆ ವಾರದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ವಿವರಿಸಿದರು.

ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದು ಮಾಡಲು ಅನುಕೂಲವಾಗುವಂತೆ ಆನ್‌ಲೈನ್‌ನಲ್ಲಿ ಫೆಬ್ರವರಿ ಮೂರನೆ ವಾರದಲ್ಲಿ ಅವಕಾಶ ನೀಡಲಾಗುತ್ತದೆ. ಎಲ್ಲ ಶಾಲೆಗಳ ಮುಖ್ಯಸ್ಥರು ಎಪ್ರಿಲ್‌ನಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ವಿವರವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆನ್‌ಲೈನ್ ಮೂಲಕವೇ ಪರೀಕ್ಷಾ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಹಾಗೂ ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದರು.

ಶಾಲಾ ಫಲಿತಾಂಶದ ಪಟ್ಟಿಗಳನ್ನು ಆನ್‌ಲೈನ್ ಮೂಲಕ ಶಾಲಾ ಮುಖ್ಯಸ್ಥರಿಗೆ ದೊರಕುವಂತೆ ಮಾಡಲಾಗಿದೆ. ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಹಾಗೂ ಮರು ಮೌಲ್ಯಮಾಪನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿರುವವರ ವಿವರ ಸಂಗ್ರಹಿಸಿಡಲಾಗುತ್ತದೆ. 2003 ರಿಂದ 2019 ರವರೆಗೆ ಉತ್ತೀರ್ಣರಾದ 1.12 ಕೋಟಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್‌ನಲ್ಲಿ ಅಳವಡಿಸಿ ಪೋಷಕರು ಹಾಗೂ ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡಲಾಗಿದೆ. ಅಲ್ಲದೆ, ಆನ್‌ಲೈನ್ ಮೂಲಕವೇ ಅಂಕಪಟ್ಟಿಗೆ ಅರ್ಜಿ ಸಲ್ಲಿಸಿ, 10 ದಿನಗಳೊಳಗೆ ಅಂಕಪಟ್ಟಿ ಪಡೆಯುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದರು.

ಮಾರ್ಚ್ 27 ರಿಂದ ಎಪ್ರಿಲ್ 9 ರವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಎ.19 ರಿಂದ 34 ಶೈಕ್ಷಣಿಕ ಜಿಲ್ಲೆಗಳ 228 ವೌಲ್ಯಮಾಪನ ಕೇಂದ್ರಗಳಲ್ಲಿ, 79,670 ವೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ತೊಡಗಿಕೊಳ್ಳಲಿದ್ದಾರೆ.

-ಎಸ್.ಸುರೇಶ್ ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News