ಜಾನಪದ ವಿವಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನ: ಗೃಹ ಸಚಿವ ಬೊಮ್ಮಾಯಿ

Update: 2020-01-20 18:28 GMT

ಹಾವೇರಿ, ಜ.20: ಜಾನಪದ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಬರುವ ಆಯವ್ಯದಲ್ಲಿ ಹೆಚ್ಚಿನ ಅನುದಾನ ಘೋಷಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮಮಾರ ನಗರದ ಶಿಗ್ಗಾಂವ ತಾಲೂಕಿನ ಗೊಟಗೋಡಿಯ ಮಲ್ಲಿಗೆ ದಂಡೆ ಸಭಾಭವನದಲ್ಲಿ ನಡೆದ ರಾಜ್ಯ ಜಾನಪದ ವಿಶವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾನಪದ ವಿಶ್ವವಿದ್ಯಾಲಯದ ಮ್ಯೂಸಿಯಂ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ಕಲಾಭವನಕ್ಕೆ ಒಂದು ಕೋಟಿ ರೂ. ಅನುದಾನ ಸೇರಿದಂತೆ ವಿವಿಗೆ ಅಗತ್ಯವಿರುವ ಇತರೆ ಸೌಲಭ್ಯಗಳು ಹಾಗೂ ವಿವಿಧ ವಸತಿ ನಿಲಯಗಳ ಮಂಜೂರಾತಿಗೆ ಅಗತ್ಯ ಅನುದಾನ ಒದಗಿಸುವ ಭರವಸೆಯನ್ನು ಅವರು ನೀಡಿದರು.

ನಮ್ಮ ನಾಡಿನಲ್ಲಿ ದೊಡ್ಡಾಟ, ಸಣ್ಣಾಟ, ಜಗ್ಗಲಗಿ, ಡೊಳ್ಳು ಕುಣಿತ ಮುಂತಾದಂತಹ ಶ್ರೀಮಂತ ಜನಪದ ಕಲೆಗಳಿವೆ. ಜನಪದ ಕಲೆಗೆ ಭಾಷೆಯಿಲ್ಲ, ಅದು ಭಾಷಾರಹಿತ ಸಾಹಿತ್ಯವಾಗಿದೆ. ಜನಪದವು ನಮ್ಮ ಬದುಕನ್ನು ರೂಪಿಸಿದೆ, ಮನಸ್ಸು ಮತ್ತು ಮಾತಿಗೂ ನೇರವಾದ ಸಂಬಂಧವನ್ನು ಕಲಿಸಿಕೊಟ್ಟಿದೆ ಎಂದು ಅವರು ಹೇಳಿದರು.

ಮಾನವಕುಲ ಎಲ್ಲಿವರೆಗೂ ಭೂಮಿಯಲ್ಲಿ ಇರುತ್ತೋ ಅಲ್ಲಿವರೆಗೂ ಜನಪದ ಅಸ್ತತ್ವದಲ್ಲಿರುತ್ತದೆ. ಜನಪದ ವಿವಿಯು ಅಭಿವೃದ್ಧಿ ಹೊಂದುವವರೆಗೂ ಬೇರೆ ಯಾವ ಕಡೆಯೂ ಹೊಸಸೆಟಂರ್‌ಗಳನ್ನು ತೆರೆಯಬಾರದು ಎಂದು ವಿವಿಯ ಸಿಂಡಿಕೇಟ್ ಸದಸ್ಯರಿಗೆ ಎಚ್ಚರಿಸಿದರು.

ಜನಪದ ವಿವಿಯಲ್ಲಿ ಸ್ಥಳೀಯರಿಗೆ ಕಲಾ ಪ್ರದರ್ಶನ ಮಾಡಲು ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ನಾವು ವಿಶ್ವವಿದ್ಯಾಲಯಕ್ಕೆ ಕಂಪೌಂಡ್ ಹಾಗೂ ಗೇಟ್‌ಗಳ ವ್ಯವಸ್ಥೆ ಮಾಡಬಾರದೆಂದು ಹೇಳಿದ್ದೇವು. ಜನಪದ ಕಲೆ ಜನರಿಂದ ಬಂದಿದ್ದು, ಇಲ್ಲಿ ಮುಕ್ತವಾಗಿ ಎಲ್ಲರೂ ಬಂದು ಕಲೆಗಳನ್ನು ಪ್ರದರ್ಶಿಸಬಹುದು. ಸ್ಥಳೀಯ ಕಲಾವಿದರಿಗೆ ಚಟುವಟಿಕೆ ಮಾಡಲು ಶೀಘ್ರದಲ್ಲಿಯೇ ಕಲಾಕೇಂದ್ರವನ್ನು ತೆರೆಯಬೇಕು. ವಿಸಿ ನೇತೃತ್ವದಲ್ಲಿ ಈ ಕೆಲಸ ಆರಂಭವಾಗಬೇಕು ಎಂದು ಅವರು ಹೇಳಿದರು.

ಜಾನಪದ ವಿವಿಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿಯಾದರೂ ಕಲಿತಿರುವುದನ್ನು ಬಳಸಿಕೊಳ್ಳಬೇಕು. ಶಿಕ್ಷಣ ಇಲಾಖೆಯು ಗುರುತಿಸುವಂತಹ ಕೋರ್ಸುಗಳು ವಿವಿಯಲ್ಲಿ ಆರಂಭವಾಗಬೇಕು. ಉಪನ್ಯಾಸಕರಾಗಿ ಕೆಲಸ ಮಾಡುವ ಅವಕಾಶಗಳಿದ್ದರೆ ಮುಂದಿನ ಪೀಳಿಗೆ ಜನಪದ ವಿವಿಗೆ ಕಲಿಯಲು ಮುಂದೆ ಬರುತ್ತಾರೆ. ಇದು ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಫೆಬ್ರವರಿಯಲ್ಲಿ ಜಾನಪದ ವಿವಿ ಹಾಗೂ ಶಿಕ್ಷಣ ಇಲಾಖೆ ಸಭೆಗಳನ್ನು ಕರೆಯಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕುವೆಂಪು ವಿವಿಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಸಿಂಡಿಕೇಟ್ ಸದಸ್ಯ ಕೆ.ವಸಂತಕುಮಾರ್, ಬಾಗಲಕೋಟೆಯ ರಾಜ್ಯ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ.ಟಿ.ಬಿ.ಸೊಲಬಕ್ಕನವರ, ರಾಜ್ಯ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News