ಶಾಸಕಾಂಗ ಪಕ್ಷ- ವಿಪಕ್ಷ ನಾಯಕ ಸ್ಥಾನಗಳನ್ನು ಪ್ರತ್ಯೇಕಿಸಿ: ಎಚ್.ಕೆ.ಪಾಟೀಲ್

Update: 2020-01-21 12:51 GMT

ಬೆಂಗಳೂರು, ಜ. 21: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಹಾಗೂ ವಿರೋಧ ಪಕ್ಷದ ನಾಯಕ ಹುದ್ದೆ ಎರಡೂ ಸ್ಥಾನಗಳನ್ನು ಪ್ರತ್ಯೇಕಗೊಳಿಸಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯುಪಿಎ ಅವಧಿಯಿಂದಲೂ ಸಂಸತ್‌ನಲ್ಲಿ ವಿಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕಗೊಳಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಇದೇ ರೀತಿ ಎರಡು ಹುದ್ದೆಗಳನ್ನು ಬೇರ್ಪಡಿಸಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿಯೂ ಮೈತ್ರಿ ಸರಕಾರದ ಅವಧಿಯಲ್ಲಿ ಎರಡೂ ಹುದ್ದೆಗಳು ಬೇರೆ-ಬೇರೆಯಾಗಿದ್ದವು. ಹೀಗಾಗಿ ಮುಂದಿನ ದಿನಗಳಲ್ಲಿಯೂ ಇದೇ ಪದ್ಧತಿ ಮುಂದುವರಿಕೆ ಮಾಡಬೇಕು ಎಂದ ಅವರು, ಎಲ್ಲ ಕಡೆಗಳಲ್ಲಿಯೂ ಒಂದೇ ಮಾದರಿ ಇರಬೇಕು ಎಂದು ಹೇಳಿದ್ದಾರೆ.

‘ಕೆಪಿಸಿಸಿಗೆ ನಾಲ್ಕು ಮಂದಿ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಅಗತ್ಯವಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ವಿಳಂಬ ಸಲ್ಲ. ಶೀಘ್ರವೇ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News