ರಾಜ್ಯ ಹಜ್ ಸಮಿತಿ ರಚನೆ: ಮಾಜಿ ಸಚಿವ ರೋಷನ್ ಬೇಗ್‌ಗೆ ಮತ್ತೆ ನಿರಾಸೆ

Update: 2020-01-21 15:24 GMT

ಬೆಂಗಳೂರು, ಜ.21: ರಾಜ್ಯ ಸರಕಾರವು ರಾಜ್ಯ ಹಜ್ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಿದ್ದು, ಹಜ್ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದ ಮಾಜಿ ಸಚಿವ ಆರ್.ರೋಷನ್ ಬೇಗ್ ಮತ್ತೊಮ್ಮೆ ನಿರಾಸೆ ಅನುಭವಿಸುವಂತಾಗಿದೆ.

ಸಮ್ಮಿಶ್ರ ಸರಕಾರದ ಆಡಳಿತ ವೈಖರಿಯನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದ ರೋಷನ್ ಬೇಗ್ ಪರವಾಗಿ ಬಿಜೆಪಿ ಹೈಕಮಾಂಡ್ ಒಲವು ತೋರಲಿಲ್ಲ. ಅಲ್ಲದೇ, ಉಪ ಚುನಾವಣೆಯಲ್ಲೂ ಟಿಕೆಟ್ ನೀಡಿರಲಿಲ್ಲ.

ರಾಜ್ಯ ಹಜ್ ಸಮಿತಿಗೆ ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ರೋಷನ್ ಬೇಗ್ ಪ್ರಯತ್ನಿಸಿದ್ದರು. ಆದರೆ, ನೂತನ ಹಜ್ ಸಮಿತಿಯ ಸದಸ್ಯರ ಪಟ್ಟಿಯಲ್ಲಿ ರೋಷನ್ ಬೇಗ್ ಹೆಸರು ಕೈ ಬಿಡಲಾಗಿದೆ. 2017ರ ಜನವರಿ 19ರಂದು ರಚಿಸಲಾಗಿದ್ದ ಹಜ್ ಸಮಿತಿಯ ಅವಧಿಯು ಪ್ರಸಕ್ತ ಸಾಲಿನ ಜ.18ರಂದು ಅಂತ್ಯಗೊಂಡಿತ್ತು.

ನೂತನ ಸದಸ್ಯರು: ಹಜ್ ಸಮಿತಿಯ ನೂತನ ಸದಸ್ಯರನ್ನಾಗಿ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಶಾಸಕಿ ಕನೀಝ್ ಫಾತಿಮಾ, ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಡಿ.ನಯೀಮ್(ಬೀದರ್), ಡಾ.ಮುಹಮ್ಮದ್ ಕಬೀರ್ ಅಹ್ಮದ್(ಬೆಂಗಳೂರು), ಪಟ್ಟಣ ಪಂಚಾಯತ್ ಸದಸ್ಯೆ ರುಖಯ್ಯೆ ಬೇಗಮ್(ಯಾದಗಿರಿ).

ಧಾರ್ಮಿಕ ಮುಖಂಡರಾದ ಮಂಗಳೂರಿನ ಎ.ಬಿ.ಮುಹಮ್ಮದ್ ಹನೀಫ್ ಅಸೈ(ಸುನ್ನಿ), ರಾಯಚೂರಿನ ಮೌಲಾನ ಹಫೀಝ್ ಮುಹಮ್ಮದ್ ರಫಿಕ್(ಸುನ್ನಿ), ಬೆಂಗಳೂರಿನ ಸಯ್ಯದ್ ಮನ್ಝೂರ್ ರಝಾ(ಶಿಯಾ), ಸಮಾಜ ಸೇವಕರಾದ ಖುಸ್ರೋ ಖುರೇಷಿ, ರವೂಫುದ್ದೀನ್ ಕಚೇರಿವಾಲೆ, ರಹ್ಮತ್ ಉಲ್ಲಾ, ಚಾಂದ್ ಪಾಷ, ಮೊಹಿದ್ದೀನ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಉಪ ಕಾರ್ಯದರ್ಶಿ ವೈ.ಎಸ್.ದಳವಾಯಿ ಜ.20ರಂದು ಅಧಿಸೂಚನೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News