ಜ.21ರಂದು ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

Update: 2020-01-21 15:36 GMT

ಬೆಂಗಳೂರು, ಜ.21: ರಾಜ್ಯ ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷರ ಆಯ್ಕೆಗಾಗಿ ಬುಧವಾರ ಬೆಳಗ್ಗೆ 11.30ಕ್ಕೆ ಬೋರ್ಡ್‌ನ ಕಚೇರಿಯಲ್ಲಿ ಚುನಾವಣೆ ನಡೆಯಲಿದೆ. 2019ನೇ ಸಾಲಿನ ಮಾ.7ರಂದು ವಕ್ಫ್ ಬೋರ್ಡ್‌ಗೆ ಚುನಾವಣೆ ನಡೆದಿದ್ದರೂ ಈವರೆಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿರಲಿಲ್ಲ.

ರಾಜ್ಯ ವಕ್ಫ್ ಬೋರ್ಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಈ ಚುನಾವಣೆಯ ಪ್ರಕ್ರಿಯೆ ನಡೆಸಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೌಲಾನ ಎ.ಕೆ.ಮುಹಮ್ಮದ್ ಶಾಫಿ ಸಅದಿ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ಬಗ್ಗೆ 9.30ಕ್ಕೆ ಮುಂಚಿತವಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮುತವಲ್ಲಿ ವಿಭಾಗದಡಿಯಲ್ಲಿ ಬೆಂಗಳೂರಿನ ಡಾ.ಮುಹಮ್ಮದ್ ಯೂಸುಫ್ ಹಾಗೂ ಚಿತ್ರದುರ್ಗದ ಕೆ.ಅನ್ವರ್ ಬಾಷ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಶಾಸಕಾಂಗ ವಿಭಾಗದಡಿಯಲ್ಲಿ ಶಾಸಕಿ ಕನೀಝ್ ಫಾತಿಮಾ ಹಾಗೂ ಶಾಸಕ ತನ್ವೀರ್ ಸೇಠ್, ಸಂಸದರ ಪೈಕಿ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್, ಕರ್ನಾಟಕ ಬಾರ್ ಕೌನ್ಸಿಲ್‌ನಿಂದ ವಕೀಲ ಆಸಿಫ್ ಅಲಿ ಶೇಖ್ ಹುಸೇನ್‌ರನ್ನು ವಕ್ಫ್ ಮಂಡಳಿಯ ಸದಸ್ಯರನ್ನಾಗಿ ಹಿಂದಿನ ಸಮ್ಮಿಶ್ರ ಸರಕಾರ ಆಯ್ಕೆ ಮಾಡಿತ್ತು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಧಾರ್ಮಿಕ ಮುಖಂಡರಾದ ವೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ(ಸುನ್ನಿ), ಮೌಲಾನ ಮೀರ್ ಅಝರ್ ಹುಸೇನ್(ಶಿಯಾ), ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯದರ್ಶಿ ಖಾಝಿ ನಫಿಸಾ ಹಾಗೂ ಸಮಾಜ ಸೇವಕ ಜಿ.ಯಾಖೂಬ್ ಅವರನ್ನು ನಾಮ ನಿರ್ದೇಶನ ಮಾಡಿ ಜ.2ರಂದು ಆದೇಶ ಹೊರಡಿಸಿತ್ತು.

ತನ್ವೀರ್ ಸೇಠ್‌ಗೆ ಗೆಲುವು ?

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಗೆಲುವು ಸಾಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಡಾ.ಮುಹಮ್ಮದ್ ಯೂಸುಫ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಮೂಲಗಳ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ತನ್ವೀರ್ ಸೇಠ್‌ಗೆ ಬೆಂಬಲಿಸಲು ಚುನಾಯಿತ ಸದಸ್ಯರೆಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News