ಕುಮಾರಸ್ವಾಮಿ ಭಾರತದ ಪರವೋ? ಪಾಕಿಸ್ತಾನದ ಪರವೋ?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2020-01-21 17:14 GMT

ಹುಬ್ಬಳ್ಳಿ, ಜ. 21: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಪೊಲೀಸರನ್ನು ಸಂಶಯದಿಂದ ನೋಡುವ ರೀತಿಯಲ್ಲಿರುವ ಹೇಳಿಕೆ ದೇಶದ್ರೋಹದಿಂದ ಕೂಡಿದ್ದು, ಕೂಡಲೇ ಕ್ಷಮೆ ಕೋರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದ ಕೆಲ ವಿಪಕ್ಷಗಳ ನಾಯಕರ ಹೇಳಿಕೆಗಳಿಗೂ ಹಾಗೂ ಪಾಕಿಸ್ತಾನದ ಹೇಳಿಕೆಗಳಿಗೂ ವ್ಯತ್ಯಾಸ ಇರುವುದಿಲ್ಲ. ಕುಮಾರಸ್ವಾಮಿ ಅವರೂ ಅದೇ ರೀತಿಯಲ್ಲಿ ಮಾತನಾಡುತ್ತಿದ್ದಾರೆಂದು ಟೀಕಿಸಿದರು.

ಕುಮಾರಸ್ವಾಮಿ ಭಾರತದ ಪರ ಇದ್ದಾರೊ ಅಥವಾ ಪಾಕಿಸ್ತಾನದ ಪರ ಇದ್ದಾರೊ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ ಜೋಶಿ, ನಮ್ಮ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಪಾಕಿಸ್ತಾನ ಕಾರಣ ಎಂದು ನಾವು ದೂರುತ್ತಿದ್ದೇವೆ. ಆ ನಿಟ್ಟಿನಲ್ಲಿ ಭಾರತವು ವಿಶ್ವಸಂಸ್ಥೆ ಸೇರಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡಲು ಯಶಸ್ವಿಯಾಗಿದೆ ಎಂದರು.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ನೀಡಬಾರದು. ಒಂದು ವೇಳೆ, ಪೊಲೀಸರೇ ಬಾಂಬ್ ಇಟ್ಟಿದ್ದಾರೆಂದು ಕುಮಾರಸ್ವಾಮಿ ಅವರಿಗೆ ಗೊತ್ತಿದ್ದರೆ, ಪ್ರಕರಣ ದಾಖಲಿಸಲಿ. ಬಾಂಬ್ ಪ್ರಕರಣದ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News