ಮೈಸೂರು: ಸಿಎಎ, ಎನ್‌ಆರ್‌ಸಿ ವಿರೋಧಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

Update: 2020-01-21 17:44 GMT

ಮೈಸೂರು,ಜ.21: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ರಾಷ್ಟ್ರೀಯ ಪೌರತ್ವ ನೊಂದಣಿ (ಎನ್‌ಆರ್‌ಸಿ) ಹಾಗೂ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ 'ನಾವು ಮೈಸೂರಿನ ವಿದ್ಯಾರ್ಥಿಗಳು' ವಿದ್ಯಾರ್ಥಿ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಪುರಭವನದ ಆವರಣದಲ್ಲಿ ಮಂಗಳವಾರ ಜಮಾಯಿಸಿದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಮುಸ್ತಾಫ ರಝ್ವಿ ಮಾತನಾಡಿ, ನಮ್ಮ ಪೌರತ್ವದ ವಿರುದ್ಧ ಅನ್ನುವುದಕ್ಕಿಂತ ಭಾರತೀಯತೆ ಉಳಿಸುವ ಹೋರಾಟವಾಗಿದೆ. ನಮಗೆ ಬೇಕಿರುವುದು ಜಾತ್ಯಾತೀತ ರಾಷ್ಟ್ರವೇ ಹೊರತು ಹಿಂದೂ ರಾಷ್ಟ್ರವಲ್ಲ, ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕತೆ, ನೋಟ್ ಬ್ಯಾನ್, ಜಿಎಸ್‍ಟಿ ಅನುಷ್ಠಾನ ಸೇರಿದಂತೆ ಹಲವು ತಪ್ಪು ನಿರ್ಣಯಗಳನ್ನು ಕೈಗೊಂಡ ಮೋದಿ ಸರ್ಕಾರದ ಮತ್ತೊಂದು ತಪ್ಪು ನಿರ್ಧಾರವೇ ಪೌರತ್ವ ತಿದ್ದುಪಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಸಿಯುತ್ತಿರುವ ಆರ್ಥಿಕತೆ, ಜಿಎಸ್‍ಟಿ ಅನಾನುಕೂಲದಿಂದ ಜನರನ್ನು ಡೈವರ್ಟ್ ಮಾಡಲು ಮೋದಿ ಮತ್ತು ಅಮಿತ್ ಶಾ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾದರು. ಆದರೆ ಅದೇ ಅವರಿಗೆ ತಿರುಗುಬಾಣವಾಗಿದೆ. ಈ ವಿದ್ಯಾರ್ಥಿಗಳ ಹೋರಾಟ ಹಳೆಯ ಇತಿಹಾಸವನ್ನು ಮರುಕಳಿಸಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಕ್ಕಾಗಿ ಅಂದು ಮಧ್ಯವಯಸ್ಕರು ಹೋರಾಟ ಮಾಡಿದರೆ, ಭಾರತೀಯತೆಯನ್ನು ರಕ್ಷಿಸಲು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ, ವಿದ್ಯಾರ್ಥಿಗಳ ಹೋರಾಟದ ಹೊಡೆತ ಎಂತಹದು ಎಂದು ಬಿಜೆಪಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

ಮತ್ತೊಬ್ಬ ವಿದ್ಯಾರ್ಥಿನಿ ನಜ್ಮಾ ನಜೀರ್ ಮಾತನಾಡಿ, ಹಿಂದೂ ಮುಸ್ಲಿಂ ಎಂಬ ಬೇದಬಾವವಿಲ್ಲದೆ ನಾವು ಬದುಕುತ್ತಿದ್ದೆವು. ಮೋದಿ ಅಮಿತ್ ಶಾ ಬಂದು ಪೌರತ್ವ ತಿದ್ದುಪಡಿ ಕಾಯ್ದೆ ತರುವ ಮೂಲಕ ಹಿಂದೂ ಮುಸ್ಲಿಂ ಎಂದು ವಿಂಗಡಣೆ ಮಾಡಿದರು. ಈ ಪಾಪ ಅವರಿಗೆ ತಟ್ಟದೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಮ್ಮೊಲ್ಲೊಬ್ಬ ಸಂಸದನಿದ್ದಾನೆ, ಅವನು ಪ್ರತಾಪ್ ಸಿಂಹ ಅಂತ. ಶಾಂತಿಯಿಂದ ಕೂಡಿದ್ದ ಮೈಸೂರಿನಲ್ಲಿ ಅಶಾಂತಿಯನ್ನು ಉಂಟು ಮಾಡಿದ್ದ. ರಾಮನ ಹೆಸರಿನಲ್ಲಿ ಹುಣಸೂರಿನಲ್ಲಿ ಹಿಂದೂ ಮುಸ್ಲಿಮರನ್ನು ಬೇರೆ ಬೇರೆ ಮಾಡಿದ ಎಂದು ಕಿಡಿಕಾರಿದರು.

ರಾಮನವಮಿ ಎಂದರೆ ನಾನು ಸೇರಿದಂತೆ ನಮ್ಮ ಹಲವಾರು ಮುಸ್ಲಿಂ ಸ್ನೇಹಿತರು ಪಾನಕ ಮಜ್ಜಿಗೆ ಪಡೆಯಲು ಸಾಲಿನಲ್ಲಿ ನಿಲ್ಲುತ್ತಿದ್ದೆವು. ಆಗ ಅವರು ನಮಗೆ ಪ್ರೀತಿಯಿಂದ ಪಾನಕ ಮಜ್ಜಿಗೆ ನೀಡುತ್ತಿದ್ದರು. ಸಂತೃಪ್ತಿಯಾಗಿ ಕುಡಿದು ಅವರ ಜೊತೆ ಬೆರೆಯುತ್ತಿದ್ದೆವು. ಅವರು ನಮ್ಮ ಮನೆಗಳಿಗೂ ಪ್ರಸಾದ ನೀಡುತ್ತಿದ್ದರು. ಅಂತಹ ಒಳ್ಳೆಯ ವಾತಾವರಣವನ್ನು ಬಿಜೆಪಿಯ ಪ್ರತಾಪ್ ಸಿಂಹ ನಂತಹ ವ್ಯಕ್ತಿಗಳು ನಾಶ ಮಾಡಿದರು ಎಂದು ಕಿಡಿಕಾರಿದರು.

ಮತ್ತೊಬ್ಬ ಸಂಸದ ತೇಜಸ್ವಿ ಸೂರ್ಯ ಪಂಕ್ಚರ್ ಹಾಕುವವರ ಬಗ್ಗೆ ಕೀಳಾಗಿ ಮಾತನಾಡುತ್ತಾನೆ. ಸ್ವಾಮಿ, ಪಂಕ್ಚರ್ ಹಾಕುವವರು ಬಳಸುವ ಸೆಲ್ಯೂಷನ್, ಟ್ಯೂಬ್ ಅಷ್ಟೇ ಏಕೆ ಅವರು ಉಜ್ಜುವ ಪೇಪರ್ ಗೂ ಟ್ಯಾಕ್ಸ್ ಕಟ್ಟಲಾಗುತ್ತಿದೆ. ಅವರು ನೀಡುವ ಟ್ಯಾಕ್ಸ್ ಹಣದಿಂದಲೇ ನೀವು ಗೂಟದ ಕಾರಿನಲ್ಲಿ ಓಡಾಡುತ್ತಿರುವುದು. ಪಂಕ್ಚರ್ ಹಾಕುವವನಿಗೆ ಇರುವ ಯೋಗ್ಯತೆ ನಿಮಗೆ ಇಲ್ಲದಂತಾಯಿತಲ್ಲಾ ಎಂದು ಲೇವಡಿ ಮಾಡಿದರು.

ಮಹಾನ್ ನಾಯಕರು ಎಂದು ತೇಜಸ್ವಿ ಸೂರ್ಯ ಮತ್ತು ಸೂಲಿಬೆಲೆಯನ್ನು ಕೊಲೆ ಮಾಡಲು ಯತ್ನಿಸುತ್ತಾರೆಯೇ, ಪೊಲೀಸರು ಮತ್ತು ಬಿಜೆಪಿ ಚಮಚಾಗಳು ಪೌರತ್ವ ಮತ್ತು ಎನ್‌ಆರ್‌ಸಿ ವಿಚಾರವನ್ನು ಮರೆಮಾಚಲು ದಿನಕ್ಕೊಂದು ಹೊಸ ಹೊಸ ತಂತ್ರಗಳನ್ನು ಅನುಸರಿಸುತಿದ್ದಾರೆ. ನಿನ್ನೆ ಮಂಗಳೂರಿನಲ್ಲಿ ಬಾಂಬ್ ಇದೆ ಎಂಬ ದೊಡ್ಡ ಗಾಸಿಪ್ ಅನ್ನು ಪೊಲೀಸರು ಮತ್ತು ಮಾಧ್ಯಮಗಳು ದಿನಗಟ್ಟಲೇ ಬಿತ್ತರಿಸಿದವು. ಭಾರತದಲ್ಲಿ ಮುಸ್ಲಿಮರಿಗೆ ಮುಂದಿನಿಂದ ಚೂರಿ ಹಾಕುತ್ತಿದ್ದಾರೆ, ಹಿಂದೂಗಳಿಗೆ ಹಿಂದಿನಿಂದ ಚೂರಿ ಹಾಕುತ್ತಿದ್ದಾರೆ. ಹಿಂದೂ ಮುಸ್ಲಿಮರನ್ನು ಬೇರೆ ಬೇರೆ ಮಾಡಿ, ತುಕಡೆ ತುಕಡೆ ಎನ್ನುತ್ತಿದ್ದಾರೆ. ಅದರೆ ನೀವು ನಿಜವಾದ ತುಕಡೆಗಳು. ಹಿಂದೂ ಪಂಥದ ಮೂಲಕ ಕೇವಲ ಎರಡು ಜಾತಿಗಳಿಗೆ ಅನುಕೂಲ ಮಾಡುತ್ತಿದ್ದಾರೆ. ದೇಶದಲ್ಲಿ ಶೇ.90ರಷ್ಟು ಮುಸ್ಲಿಂ ಹೆಸರುಗಳು ದಲಿತ, ಹಿಂದುಳಿದ ವರ್ಗಗಳ ಹೆಸರುಗಳಾಗಿವೆ. ನಾವು ದೇಶದ ಮೂಲನಿವಾಸಿಗಳಾಗಿದ್ದು, ನಮ್ಮನ್ನು ಹೊರಗಿನಿಂದ ಬಂದವರು ಆಳುತ್ತಿದ್ದಾರೆ ಎಂದು ಕಿಡಿ ಕಾರಿದರು.

ಮಾಲ್‍ಗಳಿಗೆ ನಾವು ಹೋದರೆ ನಮ್ಮನ್ನು ಸೂಕ್ಷ್ಮವಾಗಿ ತಪಾಸಣೆ ಮಾಡುತ್ತಾರೆ. ಅಂತಹದರಲ್ಲಿ ಅಂತಹ ದೊಡ್ಡ ಏರ್ ಪೋರ್ಟ್ ಒಳಗೆ ಹೋಗಬೇಕೆಂದರೆ ಸೆಕ್ಯುರಿಟಿ ಇಲ್ಲವೆ. ಇದಕ್ಕೆಲ್ಲಾ ಕಾರಣ ಅ ಏರ್‍ಪೋರ್ಟ್ ಅದಾನಿ ವಶದಲ್ಲಿರುವುದು. ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣವನ್ನು ಡೈವರ್ಟ್ ಮಾಡಲು ಇಂತಹ ಕೆಲಸವನ್ನು ಮಾಡಲಾಗಿದೆ. ಮಂಗಳೂರಿನಲ್ಲಿ ಮಧುಕರ್ ಶೆಟ್ಟಿ ಎಂಬ ಪೊಲೀಸ್ ಆಫೀಸರ್ ಇದ್ದರು. ಅವರ ನಡೆಯ ಸ್ವಲ್ಪ ಭಾಗವನ್ನು ಈಗಿನ ಪೊಲೀಸ್ ಕಮೀಷನರ್ ಹರ್ಷ ಅಳವಡಿಸಿಕೊಂಡರೆ ಸಾಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಸೇರಿದಂತೆ ಹಲವು ವಿದ್ಯಾರ್ಥಿಗಳು ಮಾತನಾಡಿದರು. ವಿವಿಧ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕಪ್ಪು ಬಟ್ಟೆ ತೊಟ್ಟು ರಾಷ್ಟ್ರಧ್ವಜ ಹಿಡಿದು, ಸಿಎಎ, ಎನ್‌ಆರ್‌ಸಿ ವಿರೋಧದ ಫಲಕಗಳನ್ನು ಹಿಡಿದು ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಸಾಹಿತಿ ದೇವನೂರು ಮಹಾದೇವ, ಉಗ್ರ ನರಸಿಂಹೇಗೌಡ, ಅಭಿರುಚಿ ಗಣೇಶ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಸಿಐಟಿಯುನ ಚಂದ್ರಶೇಖರ್ ಮೇಟಿ, ಎಐಡಿಎಸ್‍ಓ ಚಂದ್ರಕಲಾ, ವಿದ್ಯಾರ್ಥಿ ಮುಖಂಡರಾದ ನದೀಮ್ ಮುಹೀಬ್, ಮುಜಾಹಿದ್, ಶರ್ಫುದ್ದೀನ್ ಆದಿ, ಜಬೀ ಖಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮತ್ತೊಂದೆಡೆ ಎಸ್‍ಡಿಪಿಐ ಪಕ್ಷದ ವತಿಯಿಂದ ನಗರದ ಮಿಲಾದ್ ಬಾಗ್‍ನಲ್ಲಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‍ಪಿಆರ್ ವಿರೋಧಿಸಿ ಇಂದಿನಿಂದ ಎರಡು ದಿನಗಳ ಪ್ರತಿಭಟನಾ ಧರಣಿಯನ್ನು ನಡೆಸಲಾಯಿತು.

ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಸಂವಿಧಾನ ಸಂರಕ್ಷಣಾ ಸಮತಿಯ ಡಾ.ಕೃಷ್ಣಮೂರ್ತಿ ಚಮರಂ, ದಸಂಸ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮುಸ್ತಾಫ ರಝ್ವಿ ಭಾಷಣಕ್ಕೆ ಮೆಚ್ಚುಗೆ
ವಿದ್ಯಾರ್ಥಿ ಮುಖಂಡ ಮುಸ್ತಾಫ ರಝ್ವಿ ಭಾಷಣ ಕಂಡು ಸಾಹಿತಿ ದೇವನೂರು ಮಹಾದೇವ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಕುರಿತು ರಾಯಚೂರಿನ ನಿವಾಸಿ ಮುಸ್ತಾಫ ರಝ್ವಿ ಭಾಷಣ ಮಾಡುತ್ತಿದ್ದರು. ಇದನ್ನು ನೋಡಿ ದೇವನೂರು ಮಹಾದೇವ ಬೆರಗಾದರು. 

ನಂತರ ಪ್ರತಿಭಟನಾ ಸ್ಥಳದಿಂದ ಹೊರಬಂದ ದೇವನೂರು ಮಹಾದೇವ ಅವರನ್ನು ಪತ್ರಕರ್ತರು ಸರ್ ನೀವು ಮಾತನಾಡುವುದಿಲ್ಲವೆ ಎಂದು ಪ್ರಶ್ನಿಸಿದಕ್ಕೆ, ನಾನೇನ್ರಿ ಮಾತನಾಡುವುದು, ಆ ಹುಡುಗ ಎಂತಹ ಅದ್ಭುತ ವಿಚಾರಗಳನ್ನು ಮಂಡಿಸಿದ. ಅವನ ಭಾಷಣದ ಮುಂದೆ ನಮ್ಮದು ಏನೇನೂ ಇಲ್ಲ,  ಆ ಹುಡುಗ ನಮ್ಮ ನಾಯಕ ಎಂದು ಪ್ರಶಂಸೆಯ ಮಾತುಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News