ದಾವೋಸ್‍ಗೆ ಹೋದರೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಗುತ್ತಾ?: ಸಿದ್ದರಾಮಯ್ಯ

Update: 2020-01-21 18:14 GMT

ಮಂಡ್ಯ, ಜ.21: ವಿದೇಶ ಪ್ರವಾಸ ಮಾಡಿದ ತಕ್ಷಣ ರಾಜ್ಯಕ್ಕೆ ಅನುಕೂಲ ಆಗುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದಲ್ಲೇ ಯಾರು ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಇನ್ನು ದಾವೋಸ್‍ಗೆ ಹೋದರೆ ಹೂಡಿಕೆ ಆಗುತ್ತಾ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಜೀವಂತ ಸರಕಾರವೇ ಇಲ್ಲ. ಆರು ತಿಂಗಳಾದರೂ ಪೂರ್ಣ ಪ್ರಮಾಣದ ಮಂತ್ರಿಮಂಡಲ ರಚನೆ ಸಾಧ್ಯವಾಗಿಲ್ಲ. 18 ಇಲಾಖೆಗೆ ಮಂತ್ರಿಗಳೇ ಇಲ್ಲ. ಯಡಿಯೂರಪ್ಪ ಒಬ್ಬರೇ ಎಲ್ಲ ಇಲಾಖೆ ನಿಭಾಯಿಸಲಾಗುತ್ತಿಲ್ಲ ಎಂದು ಅವರು ಟೀಕಿಸಿದರು.

ನಾನು ಸಿಎಂ ಆಗಿದ್ದಾಗ ಸೋನಿಯಾ ಮೇಡಂ, ರಾಹುಲ್ ಗಾಂಧಿ ಸಂಪುಟ ವಿಸ್ತರಣೆಗೆ ಪ್ರಸ್ತಾವಕ್ಕೆ ಹತ್ತೇ ನಿಮಿಷದಲ್ಲಿ ಸಹಿ ಹಾಕುತ್ತಿದ್ದರು. ಆದರೆ, ಯಡಿಯೂರಪ್ಪ ಮಂತ್ರಿ ಮಂಡಲ ವಿಸ್ತರಣೆಗೆ ಅನುಮತಿಯೇ ದೊರೆಯುತ್ತಿಲ್ಲ. ಯಡಿಯೂರಪ್ಪ ಆಗಿದ್ದಕ್ಕೆ ಅಧಿಕಾರಕ್ಕೆ ಇದ್ದಾರೆ ಎಂದೂ ಅವರು ವ್ಯಂಗ್ಯವಾಡಿದರು.

ಮಂತ್ರಿಯಾಗಲು ಹೊರಟವರು ಈಗ ಅತಂತ್ರರಾಗಿದ್ದಾರೆ. ಅವರಿಗೆ ಕಾಂಗ್ರೆಸ್-ಜೆಡಿಎಸ್ ಪಕ್ಷ ಬಿಟ್ಟಿದ್ದು ಈಗ ಅರಿವಾಗಿದೆ. ಅವರ ಗೋಳನ್ನು ಅವರಿಂದಲೇ ಕೇಳಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಯಡಿಯೂರಪ್ಪ ಅವರದು ರೈತ ಸರಕಾರವಲ್ಲವೆ? ಅದಕ್ಕೆ ಸಾಲ ಮರುಪಾವತಿಸದ ರೈತರ ಆಸ್ತಿ ಜಪ್ತಿಗೆ ಮುಂದಾಗಿರಬೇಕು. ತನ್ನ ಸರಕಾರದಲ್ಲಿ ಮೈಷುಗರ್ ಕಾರ್ಖಾನೆ ಮುಚ್ಚಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೋದಿ ವಿರುದ್ಧವೂ ವಾಗ್ದಾಳಿ

ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಆದರೆ, ಈ ಬಗ್ಗೆ ನರೇಂದ್ರ ಮೋದಿ ಎಲ್ಲಿಯೂ ಚರ್ಚೆ ಮಾಡುತ್ತಿಲ್ಲ. ಮೋದಿ ಅಧಿಕಾರ ಬಿಟ್ಟು ಹೋಗಲಿ, ಆರ್ಥಿಕ ಪರಿಸ್ಥಿತಿ ನಾವು ಸರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಶೇ.8ರಷ್ಟಿದ್ದ ಜಿಡಿಪಿ ಬೆಳವಣಿಗೆ ಈಗ ಶೇ.2.5ಕ್ಕೆ ಕುಸಿದಿದೆ. ದೇಶದ ಆರ್ಥಿಕ ಪರಿಸ್ಥಿತಿ 42 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ಅವರು ಟೀಕಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ಸಂಬಂಧ ನಾನು ಯಾವುದೇ ಒತ್ತಡ ಹಾಕುತ್ತಿಲ್ಲ. ಅದೆಲ್ಲಾ ಮಾಧ್ಯಮ ಸೃಷ್ಟಿ. ಎಲ್ಲಾ ನೇಮಕಾತಿಯೂ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಅವರು ಸ್ಪಷ್ಟಪಡಿಸಿದರು.

ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕರಾದ ರಮೇಶ್‍ ಬಾಬು ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್, ಬಿ.ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಗಣಿಗ ರವಿಕುಮಾರ್, ಇತರೆ ಮುಖಂಡರು ಉಪಸ್ಥಿತರಿದ್ದರು.

‘ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣ ಗಾಬರಿ ಹುಟ್ಟಿಸುವ ಘಟನೆ. ಕೂಲಂಕುಷ ತನಿಖೆ ಆಗಬೇಕು. ಇಂತಹ ಬೆಳವಣಿಗೆ ಆಗದಂತೆ ತಡೆಗಟ್ಟಬೇಕು. ಇಂಟೆಲಿಜೆನ್ಸಿ ಏನ್ ಮಾಡ್ತಿದೆ? ಇಂತಹ ಘಟನೆ ತಡೆಗಟ್ಟುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ’.

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News