ರೈತರ ಜೊತೆ ಬೀದಿಗಿಳಿಯಬೇಕಾಗುತ್ತದೆ: ರಾಜ್ಯ ಸರಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ

Update: 2020-01-21 18:20 GMT

ಬೆಂಗಳೂರು, ಜ.21: ಬರಪೀಡಿತ ತಾಲೂಕುಗಳಲ್ಲಿ ರೈತರಿಂದ ಸಹಕಾರಿ ಸಂಸ್ಥೆಗಳ ಸಾಲವನ್ನು ಬಲವಂತವಾಗಿ ವಸೂಲಿ ಮಾಡಬಾರದು ಎಂದು ಹಿಂದೆ ನಮ್ಮ ಸರಕಾರ ಹೊರಡಿಸಿದ್ದ ಸುತ್ತೋಲೆಯನ್ನು ಇಂದಿನ ರಾಜ್ಯ ಸರಕಾರ ರದ್ದುಪಡಿಸಿರುವುದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಆದೇಶ ರದ್ದು ಮಾಡುವ ಮೂಲಕ ಬಲವಂತದ ಸಾಲ ವಸೂಲಿಗೆ ಪರವಾನಿಗೆ ನೀಡಿರುವ ಸರಕಾರ ರೈತರಿಗೆ ದ್ರೋಹ ಬಗೆದಿದೆ ಎಂದು ಹೇಳಿದ್ದು, ಅತಿವೃಷ್ಟಿ ಮತ್ತು ಅನಾವೃಷ್ಟಿ ಪೀಡಿತ ರೈತರಿಂದ ಬಲತ್ಕಾರವಾಗಿ ಸಾಲ ವಸೂಲಿ ಮಾಡುವ ದುಸ್ಸಾಹಸವನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯ ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ರೈತರ ಜೊತೆ ನಮ್ಮ ಪಕ್ಷ ಕೂಡ ಬೀದಿಗಿಳಿಯಬೇಕಾಗುತ್ತದೆ ಎಂದು ಮತ್ತೊಂದು ಟ್ವಿಟ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಹದಿನೈದು ಜಿಲ್ಲೆಯ 55 ತಾಲೂಕುಗಳು ಅತಿವೃಷ್ಟಿಗೆ ತುತ್ತಾಗಿ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಅವರಿಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರವನ್ನು ಇನ್ನೂ ನೀಡದಿರುವ ಸರಕಾರ ಈಗ ಬಲತ್ಕಾರದಿಂದ ಬಾಕಿ ಸಾಲ ವಸೂಲಿ ಮಾಡಲು ಹೊರಟಿರುವುದು ಅಮಾನವೀಯ ನಡೆದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರಕಾರದ ರೈತ ವಿರೋಧಿ ನಿಲುವು ಅನಿರೀಕ್ಷಿತವಾದುದೇನಲ್ಲ. ರೈತರ ಪರ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ರೈತರನ್ನು ಗುಂಡಿಕ್ಕಿ ಸಾಯಿಸಿದ ಪಕ್ಷದ ನಿಜಬಣ್ಣ ನಿಧಾನವಾಗಿ ಈಗ ಬಯಲಾಗುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News