ಅಶ್ಲೀಲ ಚಿತ್ರಗಳಲ್ಲಿ 113 ಮಕ್ಕಳ ಬಳಕೆ ಆರೋಪ: ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2020-01-21 18:35 GMT

ಬೆಂಗಳೂರು, ಜ.21: ರಾಜ್ಯದಲ್ಲಿ 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ವರದಿ ನೀಡಿದರೂ ರಾಜ್ಯ ಪೊಲೀಸರು ನ್ಯಾಯಾಲಯದ ಒತ್ತಡದ ಬಳಿಕ ಏಳು ಪ್ರಕರಣಗಳನ್ನು ದಾಖಲಿಸಿರುವ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. 

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವರದಿ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪಿಐಎಲ್ ಹಾಗೂ ಬಚಪನ್ ಬಚಾವೋ ಎನ್‌ಜಿ ಒ ಸಂಸ್ಥೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ನ್ಯಾಯಪೀಠವು ಪ್ರತಿಕ್ರಿಯಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಖಾರವಾಗಿ ಪ್ರಶ್ನಿಸಿತು. ಹಾಗೆಯೇ, ಒಂದೇ ದಿನದಲ್ಲಿ ತನಿಖೆ ಮುಗಿಸಿ ವರದಿ ನೀಡಿರುವ ಪೊಲೀಸ್ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಬೇಸರ ವ್ಯಕ್ತಪಡಿಸಿತು. ಬಳಿಕ ಕೇಂದ್ರದ ವರದಿ, ಹೈಕೋರ್ಟ್ ಸೂಚನೆಗಳನ್ನು ನಿರ್ಲಕ್ಷ್ಯ ಮಾಡಿ ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ಬೇಜವಾಬ್ದಾರಿ ಪ್ರದರ್ಶಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸುವಂತೆ ಹಾಗೂ ತಪ್ಪಿತಸ್ಥ ಅಧಿಕಾರಿಗಳು ತಮ್ಮಿಂದಾಗಿರುವ ಪ್ರಮಾದ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶಿಸಿತು.

ಅಧಿಕಾರಿಗಳು ಈಗಾಗಲೇ ತಪ್ಪು ಮಾಡಿದ್ದಾರೆ. ಈ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ವ್ಯವಸ್ಥೆ ಮೇಲಿದೆ ಎಂದು ಅಭಿಪ್ರಾಯಪಟ್ಟ ಪೀಠ, ಪೊಲೀಸರಿಗೆ ಸಿಆರ್‌ಪಿಸಿ ಅಥವಾ ಪೊಲೀಸರ ಕಾರ್ಯಾರಂಭದ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿತು. ಸಿಆರ್‌ಪಿಸಿ ಸೆಕ್ಷನ್ 154(1) ರಲ್ಲಿ ಯಾವುದೇ ಅಪರಾಧದ ಬಗ್ಗೆ ಸಿಗುವ ಯಾವುದೇ ರೀತಿಯ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಬಹುದು ಎಂದಿದೆ. ಇಷ್ಟು ಕೂಡ ಪೊಲೀಸರಿಗೆ ಅರ್ಥ ಆಗಿಲ್ಲವೇ ಎಂದು ಪ್ರಶ್ನಿಸಿತು. ಫೆ. 7 ಕ್ಕೆ ವಿಚಾರಣೆ ಮುಂದೂಡಿದ ಪೀಠ, ಅಷ್ಟರಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News