ರಾಜ್ಯದ ಗಡಿ ಭಾಗದಲ್ಲಿ ಮದ್ಯ ಮಾರಾಟ ಪ್ರಮಾಣ ಹೆಚ್ಚಳ

Update: 2020-01-21 18:42 GMT
Photo: Reuters

ಬೆಂಗಳೂರು, ಜ.21: ರಾಜ್ಯದ ನೆರೆಯ ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗದಲ್ಲಿರುವ ಮದ್ಯದ ಮಳಿಗೆಗಳಲ್ಲಿ ಮಾರಾಟ ಪ್ರಮಾಣ ಹೆಚ್ಚಳಗೊಂಡಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮದ್ಯಪಾನ ನಿಷೇಧ ಮಾಡುವುದಾಗಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಏಕಾಏಕಿ ಮದ್ಯದ ಬೆಲೆ ಏರಿಕೆ ಮಾಡಿ, ಮದ್ಯಪ್ರಿಯರಿಗೆ ಶಾಕ್ ನೀಡಿತ್ತು.

ಇದೀಗ ರಾಜ್ಯದ ಗಡಿಭಾಗವಾದ ಮುಳಬಾಗಿಲು, ಗೌರಿಬಿದನೂರು, ಕೆಜಿಎಫ್, ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ ಗಡಿ ಭಾಗದಲ್ಲಿ ಮದ್ಯದ ಮಾರಾಟ ಹೆಚ್ಚಾಗಿದೆ. ಅದರಲ್ಲೂ ಡಿಸೆಂಬರ್ 30 ಹಾಗೂ 31 ರಂದು ಭರ್ಜರಿ ವ್ಯಾಪಾರವಾಗಿದ್ದು ಸಾಮಾನ್ಯಕ್ಕಿಂತ 3-4 ಪಟ್ಟು ಇಂಡೆಂಟ್ ಹೆಚ್ಚಳವಾಗಿತ್ತು ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಅಬಕಾರಿ ಮೂಲದಿಂದ ಡಿಸೆಂಬರ್ ತಿಂಗಳಲ್ಲೇ 1700 ಕೋಟಿ ರೂ. ವರೆಗೆ ಆದಾಯ ಸಂಗ್ರಹವಾಗಿತ್ತು. ಡಿ.21 ರಿಂದ 31 ರವರೆಗೆ 516 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. 32 ಅಬಕಾರಿ ಜಿಲ್ಲೆಗಳ ಪೈಕಿ ಬೆಂಗಳೂರು, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಹಲವು ಜಿಲ್ಲೆಗಳಲ್ಲಿ ಮದ್ಯ ಮಾರಾಟ ಪ್ರಮಾಣ ಹೆಚ್ಚಾಗಿತ್ತು.

ಆಂಧ್ರಪ್ರದೇಶದಲ್ಲಿ ವೈನ್ಸ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಮದ್ಯದ ಬೆಲೆ ಶೇ.20 ರಿಂದ 40 ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ 180 ಎಂಎಲ್‌ಗೆ ಅನ್ವಯವಾಗಿದೆ. ಇದರಿಂದ ಕರ್ನಾಟಕದಲ್ಲಿ 200 ರೂ. ಬೆಲೆಯ 180 ಎಂಎಲ್ ಮದ್ಯ ಆಂಧ್ರಪ್ರೇಶದಲ್ಲಿ 260 ರಿಂದ 280 ರೂ.ಗೆ ಹೆಚ್ಚಳವಾಗಿರುವುದರಿಂದ ಆಂಧ್ರದ ಹಲವು ಜಿಲ್ಲೆಗಳವರು ಕರ್ನಾಟಕದ ಗಡಿ ಭಾಗದಿಂದ ಮದ್ಯ ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಆಂಧ್ರದಲ್ಲೇನಾಗಿದೆ?: ಸರಕಾರದ ಚುನಾವಣಾ ಪೂರ್ವ ಭರವಸೆಯಂತೆ ಮದ್ಯ ಮಾರಾಟಕ ನಿಯಂತ್ರಣಕ್ಕೆ ತರಲು ಮುಂದಾಗಿತ್ತು. ಪರವಾನಗಿ ಅವಧಿ ಮುಗಿದಿದ್ದ ವೈನ್ಸ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಪರವಾನಗಿ ನವೀಕರಣ ಮಾಡಿರಲಿಲ್ಲ. ಪರವಾನಗಿ ಅವಧಿ ಇದ್ದವರು ನ್ಯಾಯಲಯದ ಮೊರೆ ಹೋಗಿದ್ದರಿಂದ ಪರವಾನಗಿ ಅವಧಿ ಮುಗಿಯದವರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಲಾಗಿದೆ.

ಮುಂದಿನ ಹಂತದಲ್ಲಿ ಪರವಾನಗಿ ಅವಧಿ ಮುಗಿಯುತ್ತಿದ್ದಂತೆ ಸರಕಾರದ ವ್ಯಾಪ್ತಿಗೆ ಎಲ್ಲ ವೈನ್ಸ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್‌ಗಳು ಬರಲಿವೆ. ನಂತರ ಕೇವಲ ಸರಕಾರಿ ವೈನ್ಸ್‌ಗಳಷ್ಟೇ ಕೆಲಸ ಮಾಡಲಿದ್ದು, ಬೆ.10 ರಿಂದ ಸಂಜೆ 6 ರವರೆಗೆ ಅಷ್ಟೇ ಖರೀದಿಗೆ ಅವಕಾಶ ನೀಡಿದ್ದು, ಅದಕ್ಕಾಗಿ ಅದಕ್ಕಾಗಿ 500 ರೂ. ಮೌಲ್ಯದ ರೀಚಾರ್ಜ್ ಕೂಪನ್ ವ್ಯವಸ್ಥೆ ಜಾರಿಗೆ ತೀರ್ಮಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News