ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಡಾ.ಮುಹಮ್ಮದ್ ಯೂಸುಫ್

Update: 2020-01-22 14:30 GMT

ಬೆಂಗಳೂರು, ಜ.22: ರಾಜ್ಯ ವಕ್ಫ್ ಬೋರ್ಡ್‌ಗೆ ಚುನಾವಣೆ ನಡೆದು 10 ತಿಂಗಳು ಕಳೆದ ಬಳಿಕ ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಮುತವಲ್ಲಿ ವಿಭಾಗದಲ್ಲಿ ಚುನಾಯಿತರಾಗಿದ್ದ ಮಾಜಿ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ಗೆಲುವಿನ ನಗೆ ಬೀರಿದ್ದಾರೆ.

ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ 10 ಮಂದಿ ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದರು. ಈ ಪೈಕಿ ಕಾಂಗ್ರೆಸ್ ಬೆಂಬಲಿತ ಮುಹಮ್ಮದ್ ಯೂಸುಫ್ ಆರು ಮತಗಳನ್ನು ಪಡೆದು ಜಯಶಾಲಿಯಾದರೆ, ರಾಜ್ಯ ಸರಕಾರದಿಂದ ನಾಮನಿರ್ದೇಶನಗೊಂಡಿರುವ ಮೌಲಾನ ಎ.ಕೆ.ಎಂ.ಶಾಫಿ ಸಅದಿ ನಾಲ್ಕು ಮತಗಳನ್ನು ಪಡೆಯುವ ಮೂಲಕ ಸೋಲು ಅನುಭವಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಹಮ್ಮದ್ ಯೂಸುಫ್, ವಕ್ಫ್ ಬೋರ್ಡ್ ಅನ್ನು ಇಡೀ ದೇಶದಲ್ಲಿ ಮಾದರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದರು. ರಾಜ್ಯದಲ್ಲಿರುವ ಎಲ್ಲ ವಕ್ಫ್ ಆಸ್ತಿಗಳ ಅಭಿವೃದ್ಧಿ ಹಾಗೂ ಮುಸ್ಲಿಮ್ ಸಮುದಾಯದ ಕಲ್ಯಾಣಕ್ಕಾಗಿ ಒತ್ತು ನೀಡಲು ಸದಸ್ಯರ ನೇತೃತ್ವದಲ್ಲಿ ಉಪ ಸಮಿತಿಗಳನ್ನು ರಚನೆ ಮಾಡಲಾಗುವುದು ಎಂದು ಅವರು ಹೇಳಿದರು.

ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್ ಮಾತನಾಡಿ, ವಕ್ಫ್ ಬೋರ್ಡ್ ಅಧ್ಯಕ್ಷರ ಚುನಾವಣೆಯಲ್ಲಿ ಮುಹಮ್ಮದ್ ಯೂಸುಫ್ ಹಾಗೂ ಮೌಲಾನ ಶಾಫಿ ಸಅದಿ ಸ್ಪರ್ಧಿಸಿದ್ದರು. 10 ಮಂದಿ ಸದಸ್ಯರು ಮತದಾನ ಮಾಡಿದ್ದು, ಯೂಸುಫ್ ಅವರಿಗೆ ಆರು ಮತಗಳು ಹಾಗೂ ಶಾಫಿ ಸಅದಿಗೆ ನಾಲ್ಕು ಮತಗಳು ಬಂದಿವೆ ಎಂದರು.

ರಾಜ್ಯ ವಕ್ಫ್ ಬೋರ್ಡ್‌ನ ಆಡಳಿತಾಧಿಕಾರಿಯೂ ಆಗಿದ್ದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಎ.ಬಿ.ಇಬ್ರಾಹಿಮ್, ಬೋರ್ಡ್‌ನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಒದಗಿಸಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬೋರ್ಡ್‌ನ ಮೊದಲ ಸಭೆ ನಡೆಯಲಿದೆ. ಆನಂತರ, ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಬೋರ್ಡ್ ಅಸ್ತಿತ್ವದಲ್ಲಿ ಇಲ್ಲದ ಸಂದರ್ಭದಲ್ಲಿ ಕೈಗೊಂಡಿರುವ ತೀರ್ಮಾನಗಳ ಕುರಿತು ಪುನರ್ ಪರಿಶೀಲನೆ ಮಾಡಲು ನಿರ್ಧರಿಸಿದ್ದೇವೆ. ಬೋರ್ಡ್ ಸ್ವಾಯತ್ತ ಸಂಸ್ಥೆಯಾಗಿದ್ದು, ಸರಕಾರದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಅಧ್ಯಕ್ಷರ ಚುನಾವಣೆ ಘೋಷಣೆಯಾದ ನಂತರ ಕೆಲವು ಗಂಭೀರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅವುಗಳ ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಮಾಜಿ ಸಚಿವ ತನ್ವೀರ್ ಸೇಠ್, ಬೋರ್ಡ್ ಅಸ್ತಿತ್ವದಲ್ಲಿ ಇಲ್ಲದ ವೇಳೆ ಅನುದಾನ ಸರಿಯಾದ ರೀತಿಯಲ್ಲಿ ಬಳಕೆಯಾಗಿದೆಯೇ ಇಲ್ಲವೇ ಎಂಬುದರ ಕುರಿತು ಮಾಹಿತಿ ಪಡೆಯಬೇಕು. ಬೋರ್ಡ್ ಅನ್ನು ಶಕ್ತಿಯುತ ಮಾಡಬೇಕಿದೆ. ರಾಜ್ಯದಲ್ಲಿರುವ ಮುಸ್ಲಿಮ್ ಸಮುದಾಯದ ಪ್ರಗತಿ ಹಾಗೂ ವಕ್ಫ್ ಆಸ್ತಿಗಳ ಅಭಿವೃದ್ಧಿಗೂ ಶ್ರಮಿಸಬೇಕಿದೆ. ನಮ್ಮ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News