×
Ad

ಸ್ಫೋಟಕ ಪತ್ತೆ ಪ್ರಕರಣ: ಆರೋಪಿ ವಿಷಯದಲ್ಲಿ ಬಿಜೆಪಿಯನ್ನು ಕುಟುಕಿದ ದಿನೇಶ್ ಗುಂಡೂರಾವ್

Update: 2020-01-22 21:58 IST

ಬೆಂಗಳೂರು, ಜ.22: ಮಂಗಳೂರು ಬಾಂಬ್ ಪ್ರಕರಣದ ಆರೋಪಿ ಶರಣಾಗಿದ್ದು, ಘಟನೆಗೆ ಕಾರಣ ನಿರುದ್ಯೋಗವೇ? ಪ್ರಚೋದನೆಯೇ? ಬೇರೆ ಏನಾದರೂ ಕಾರಣವಿದೆಯೆ ಎನ್ನುವ ಸತ್ಯಾಸತ್ಯತೆ ಪತ್ತೆ ಹಚ್ಚುವುದು ಈಗ ಪೊಲೀಸರ ಜವಾಬ್ದಾರಿ. ಆರೋಪಿಯ ವಿಷಯದಲ್ಲಿ ಬಿಜೆಪಿಗೆ ನಿರಾಸೆಯಾಗಿದೆ. ‘ರಾವ್’ ಎಂಬ ಮನೆತನದ ಹೆಸರಿಗಿಂತ ಬೇರೆ ಇದ್ದರೆ ಹೆಚ್ಚು ಸಂಭ್ರಮಿಸುತ್ತಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಪಾತ್ರವಿದೆ ಎನ್ನುವ ಆರೋಪ ಕೇಳಿಬಂದಾಗ ರಾಜ್ಯ ಬಿಜೆಪಿ ಸನಾತನ ಸಂಸ್ಥೆಯನ್ನು ಸಮರ್ಥಿಸಿಕೊಂಡಿತ್ತು. ಆದರೆ ಆ ಕೃತ್ಯಗಳಲ್ಲಿ ಸನಾತನ ಸಂಸ್ಥೆಯ ಪಾತ್ರವಿದೆ ಎನ್ನುವುದಕ್ಕೆ ಪೂರಕ ಸಾಕ್ಷಗಳು ಸಿಗುತ್ತಾ ಹೋದಂತೆಲ್ಲಾ ಅವರು ಜಾಣ ಮೌನ ವಹಿಸಿದರು ಎಂದರು.

ಒಂದು ನಿರ್ದಿಷ್ಟ ಕೋಮಿನ ವ್ಯಕ್ತಿಗಳು ಆರೋಪಿಗಳಾದರೆ ರಾಜ್ಯ ಬಿಜೆಪಿ ಹೆಚ್ಚು ಸಂಭ್ರಮಿಸುತ್ತದೆ. ಆ ಆರೋಪಿಯನ್ನು ಎಲ್ಲರೂ ಸೇರಿ ಟೀಕಿಸುತ್ತಾರೆ, ಕೃತ್ಯವನ್ನು ಖಂಡಿಸುತ್ತಾರೆ, ದ್ವೇಷದ ಹೇಳಿಕೆ ನೀಡುತ್ತಾರೆ. ಆದರೆ, ಅವರು ನಿರೀಕ್ಷಿಸಿದ ಕೋಮಿನ ವ್ಯಕ್ತಿ ಆರೋಪಿ ಅಲ್ಲ ಎಂದು ತಿಳಿಯುತ್ತಿದ್ದಂತೆ ಸುಮ್ಮನಾಗಿ ಬಿಡುತ್ತಾರೆ ಎಂದು ಅವರು ಟೀಕಿಸಿದರು.

ವಿದ್ರೋಹಿ ಕೃತ್ಯಗಳನ್ನು ಯಾವುದೇ ಧರ್ಮದವರು ಎಸಗಿದರೂ ಅದು ಭಯೋತ್ಪಾದನೆಯೆ. ಆರೋಪಿ ಮುಸ್ಲಿಮ್ ಆಗಿದ್ದರೆ ಅವನ ವಿರುದ್ಧ ತಿರುಗಿ ಬೀಳುವುದು, ಹಿಂದು ಆಗಿದ್ದರೆ ಜಾರಿಕೊಳ್ಳುವುದು, ಪರೋಕ್ಷವಾಗಿ ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಈಗಾಗಲೇ ಬಿಜೆಪಿ ದೇಶದಲ್ಲಿ ಕೋಮು ವಿಷ ಹರಡಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಬಿಜೆಪಿಯವರಿಗೆ ಇಡೀ ದೇಶ ತಾವು ಹೇಳಿದಂತೆ ಕೇಳಬೇಕು, ತಾವು ಹೇಳಿದಂತೆ ನಡೆಯಬೇಕು ಎನ್ನುವ ಧೋರಣೆ ಇದೆ. ಹಾಗಾಗಿ ಬಿಜೆಪಿ ಜೊತೆ ಗುರುತಿಸಿಕೊಳ್ಳದವರನ್ನೆಲ್ಲಾ ಹಿಂದು ವಿರೋಧಿಗಳು, ದೇಶದ್ರೋಹಿಗಳೆಂದು ಬಿಂಬಿಸುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ಓಲೈಕೆಗೆ ಪ್ರಹ್ಲಾದ್ ಜೋಶಿ ಅಂತವರು ಈ ರೀತಿ ಮಾತನಾಡುತ್ತಾರೆ ಎಂದು ಅವರು ಹೇಳಿದರು.

ಪ್ರಹ್ಲಾದ್ ಜೋಶಿ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುರಿತು ‘ದೇಶದ್ರೋಹಿ’ ಎಂಬ ಪದವನ್ನು ಅಷ್ಟು ಸಲೀಸಾಗಿ ಹೇಗೆ ಬಳಸಿದರು? ರಾಜಕೀಯವಾಗಿ ಕುಮಾರಸ್ವಾಮಿ ಅವರನ್ನ ಟೀಕಿಸಬಹುದಿತ್ತು, ಅದನ್ನ ಬಿಟ್ಟು ದೇಶದ್ರೋಹಿ ಎಂದಿದ್ದು ಸಂಸದ ಸ್ಥಾನದ ಘನತೆಗೆ ತಕ್ಕುದ್ದಲ್ಲ. ಇನ್ನಾದರೂ ಇಂತಹ ಹೇಳಿಕೆ ನೀಡುವುದನ್ನ ನಿಲ್ಲಿಸಲಿ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಸಿಎಎ ವಿರೋಧಿಸಿ ಇಡೀ ದೇಶದ ಜನರು ಒಗ್ಗಟ್ಟಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವ ಗೃಹ ಸಚಿವ ಅಮಿತ್ ಶಾ ಅವರು ಈವರೆಗೂ ಯಾರನ್ನು ಕರೆದು ಮಾತನಾಡುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ. ಈ ಮೂಲಕ ಅವರೇ ದೇಶದಲ್ಲಿ ಹಿಂಸಾಚಾರ, ಗಲಭೆಗಳಿಗೆ ಪರೋಕ್ಷ ಪ್ರೇರಣೆ ನೀಡುತ್ತಿದ್ದಾರೆ ಎಂದು ಅವರು ದೂರಿದರು.

ಪಕ್ಷದ ಕಚೇರಿ ಮುಂದೆ, ಪಕ್ಷದ ಯಾವುದೇ ನಾಯಕರ ವಿರುದ್ಧ ಪ್ರತಿಭಟನೆ ಮಾಡಿದರೆ ಅದನ್ನು ಸಹಿಸಲಾಗುವುದಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳಿದ್ದಲ್ಲಿ ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು. ಬಹಿರಂಗವಾಗಿ ನಡೆದುಕೊಳ್ಳುವುದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದ್ದು, ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News