85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 13 ದಿನಗಳಷ್ಟೇ ಬಾಕಿ: ಸರಕಾರದಿಂದ ಇನ್ನೂ ದೊರತಿಲ್ಲ ಅನುದಾನ

Update: 2020-01-22 16:57 GMT

ಕಲಬುರ್ಗಿ, ಜ.22 : ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 13 ದಿನಗಳಷ್ಟೇ ಉಳಿದಿವೆ. ವಿವಿಧ ಸಮಿತಿಯವರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರೂ ಒಡಕಿನ ಧ್ವನಿ ಇನ್ನೂ ನಿಂತಿಲ್ಲ. ಎಲ್ಲರನ್ನೂ ಒಳಗೊಂಡ ಸಮ್ಮೇಳನ ಎಂಬ ಪರಿಕಲ್ಪನೆ ಸಾಕಾರಗೊಂಡು ಸಡಗರ ಮನೆ ಮಾಡಿಲ್ಲ.

ಮೂರು ದಶಕಗಳ ನಂತರ ಸಮ್ಮೇಳನದ ಆತಿಥ್ಯ ಕಲಬುರ್ಗಿಗೆ ದೊರೆತಿದೆ. ಸ್ಥಳೀಯ ಜನಸಾಮಾನ್ಯರೂ ಅಕ್ಷರ ಜಾತ್ರೆಯನ್ನು ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ. ಆದರೆ, ಕೆಲವರ ಸ್ವಪ್ರತಿಷ್ಠೆ ಮತ್ತು ವಿರೋಧದಿಂದಾಗಿ ನಿತ್ಯವೂ ಇದರ ಬಗ್ಗೆಯೇ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿವೆ.

ಸಮ್ಮೇಳನದಲ್ಲಿ ತೊಡಗಿಸಿಕೊಳ್ಳಲು ನಮಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಕೆಲ ಸಾಹಿತಿಗಳ ಮತ್ತು ಕನ್ನಡ ಪರ ಸಂಘಟನೆಗಳ ಸಿಟ್ಟು ತಣ್ಣಗಾಗಿಲ್ಲ. ಬಹುತೇಕ ಸಂಘಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳವರು ನಮ್ಮನ್ನು ಕರೆದೇ ಇಲ್ಲ ಎನ್ನುತ್ತಿದ್ದಾರೆ. ಈ ವಿದ್ಯಮಾನ, ಸಮ್ಮೇಳನದ ಸ್ವಾಗತ ಸಮಿತಿಯ ಕೋಶಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಬಿ.ಶರತ್‌ಗೂ ಬೇಸರ ತರಿಸಿದೆ ಎನ್ನಲಾಗಿದೆ.

ಅನುದಾನ ಬಿಡುಗಡೆಯಾಗಿಲ್ಲ: ಸಾಹಿತ್ಯ ಸಮ್ಮೇಳನಕ್ಕೆ 14 ಕೋಟಿ ವೆಚ್ಚ ತಗುಲುತ್ತದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಂದಾಜು ಪಟ್ಟಿ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಿದೆ. ಆದರೆ, ಸರಕಾರದಿಂದ ಇನ್ನೂ ಅನುದಾನ ಬಿಡುಗಡೆಯೇ ಆಗಿಲ್ಲ. ಈ ನುಡಿಜಾತ್ರೆಗೆ ಅನುದಾನ ನೀಡಿ ಎಂದು ಜಿಲ್ಲೆಯ ಎಲ್ಲ ಶಾಸಕರು ಒಟ್ಟು ಸೇರಿ ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಗೋಜಿಗೆ ಹೋಗಿಲ್ಲ.

ಕಸಾಪ ಕೇಂದ್ರ ಸಮಿತಿ 5 ಲಕ್ಷ ಮುಂಗಡ ನೀಡಿದೆ. ಸ್ಥಳೀಯರ ದೇಣಿಗೆ ಹಾಗೂ ಸಮ್ಮೇಳನಕ್ಕೆ ನೋಂದಣಿ ಮಾಡಿಸಿಕೊಂಡಿರುವ ಪ್ರತಿನಿಧಿಗಳ ಶುಲ್ಕ ಸೇರಿ ಸಮ್ಮೇಳನದ ಖಾತೆಯಲ್ಲಿ 25 ಲಕ್ಷದಷ್ಟು ಹಣ ಇದೆ. ನಿತ್ಯದ ಸಿದ್ಧತೆಗೆ ಯಾವುದೇ ತೊಂದರೆಯಾಗಿಲ್ಲ ಎಂದಿರುವ ಜಿಲ್ಲಾಧಿಕಾರಿ ಸಮ್ಮೇಳನದಲ್ಲಿ ಯಾವುದಕ್ಕೆ ಎಷ್ಟು ವೆಚ್ಚ ತಗುಲುತ್ತದೆ ಎಂಬ ಪ್ರತ್ಯೇಕ ಅಂದಾಜು ಪಟ್ಟಿ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾಹಿತಿ ಕೇಳಿದ್ದಾರೆ. ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಯವರು ಅನುಮೋದನೆ ನೀಡಿದ್ದು, 2-3 ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ನುಡಿ ಜಾತ್ರೆಯ ಆತಿಥ್ಯ ವಹಿಸಿಕೊಳ್ಳಲು ನಮ್ಮ ಜಿಲ್ಲೆಗೆ ಸಿಕ್ಕಿರುವುದು ನಮ್ಮ ಭಾಗ್ಯ. ಎಲ್ಲರೂ ಒಡಕಿನ ಧ್ವನಿ ಬಿಟ್ಟು, ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಲು ಮುಂದಾಗಬೇಕಿದೆ. ನಮ್ಮ ಸೌಹಾರ್ದ ಮತ್ತು ದಾಸೋಹ ಸಂಸ್ಕೃತಿಯನ್ನು ನಾಡಿನ ಜನರಿಗೆ ತೋರಿಸೋಣ ಬನ್ನಿ.

-ಡಾ.ವಸಂತ ಕುಷ್ಟಗಿ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News