‘ಹೂಡಿಕೆ ಆಕರ್ಷಣೆ’: ರಾಜ್ಯದ ಪ್ರಯತ್ನಕ್ಕೆ ಮಧ್ಯಪ್ರದೇಶ ಸಿಎಂ ಕಮಲನಾಥ್ ಮೆಚ್ಚುಗೆ

Update: 2020-01-22 18:05 GMT

ದಾವೋಸ್, ಜ.22: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಇಂದು ಬೆಳಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರೊಂದಿಗೆ ಬೆಳಗಿನ ಉಪಾಹಾರದೊಂದಿಗೆ ಉಭಯ ರಾಜ್ಯಗಳ ಆರ್ಥಿಕ ಸ್ಥಿತಿ ಗತಿಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕಮಲ್‌ನಾಥ್, ರಾಜ್ಯದಲ್ಲಿರುವ ಕೈಗಾರಿಕೆಗಳಿಗೆ ಉತ್ತೇಜನಕಾರಿ ವಾತಾವರಣ ಹಾಗೂ ರಾಜ್ಯಕ್ಕೆ ಬಂಡವಾಳ ತರಲು ಕರ್ನಾಟಕ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಹೂಡಿಕೆದಾರನೂ ಬೆಂಗಳೂರು ಕುರಿತು ಹಾಗೂ ಪೂರ್ವರಾಷ್ಟ್ರಗಳಲ್ಲಿ ಬೆಂಗಳೂರು ಜ್ಞಾನಾಧಾರಿತ ಕೇಂದ್ರವಾಗಿ ಬೆಳೆದಿರುವ ಕುರಿತು ಉಲ್ಲೇಖಿಸುತ್ತಾರೆ. ಈ ವಿಷಯದಲ್ಲಿ ನಿಮ್ಮನ್ನು ಮೀರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಯನ್ನು ಅವರು ಅಭಿನಂದಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಮಲನಾಥ್ ಅವರಿಗೆ ರಾಜ್ಯ ಸರಕಾರವು ಕೃಷಿ ವಲಯದಲ್ಲಿ ಕೈಗೊಂಡಿರುವ ನೂತನ ಉಪಕ್ರಮಗಳ ಕುರಿತು ಮಾಹಿತಿ ನೀಡುತ್ತಾ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಭಾರತ ಸರಕಾರ ನೀಡುವ 6 ಸಾವಿರ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 4 ಸಾವಿರ ರೂ.ಗಳನ್ನು ರಾಜ್ಯ ಸರಕಾರ ನೀಡುತ್ತಿದೆ. ಇದರಿಂದ 40 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.

ಕಮಲ್ನಾಥ್ ಬೆಂಗಳೂರನ್ನು ಕೃತಕ ಬುದ್ಧಿಮತ್ತೆ ಮತ್ತು ಆತಿಥ್ಯ ವಲಯಗಳ ಪ್ರಮುಖ ಕೇಂದ್ರವಾಗಿ ಅಭಿವದ್ಧಿ ಪಡಿಸುವ ಕುರಿತು ಅರಿತುಕೊಳ್ಳಲು ಆಸಕ್ತಿ ವಹಿಸಿದರು. ಅವರು ಕರ್ನಾಟಕ ಪೆವಿಲಿಯನ್ ಕುರಿತು ಹಾಗೂ ವರ್ಲ್ಡ್ ಎಕನಾಮಿಕ್ ಫೋರಂ ನಲ್ಲಿ ಹೂಡಿಕೆ ಆಕರ್ಷಿಸುವ ಕುರಿತು ಅಧಿಕಾರಿಗಳ ನಡೆಯನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News