ಜೋಪಡಿಗಳ ತೆರವು ಕಾರ್ಯಾಚರಣೆಗೆ ಹೈಕೋರ್ಟ್ ತಡೆ: ಪ್ರಮಾಣ ಪತ್ರ ಸಲ್ಲಿಸಲು ಬಿಬಿಎಂಪಿ-ಪೊಲೀಸರಿಗೆ ನಿರ್ದೇಶನ

Update: 2020-01-22 18:21 GMT

ಬೆಂಗಳೂರು, ಜ.22: ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಆರೋಪದಡಿ ಬಿಬಿಎಂಪಿ ವಾರ್ಡ್-151ರ ವ್ಯಾಪ್ತಿಯಲ್ಲಿದ್ದ ನೂರಾರು ಜೋಪಡಿಗಳನ್ನು ದಿಢೀರ್ ತೆರವುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೆರವು ಕಾರ್ಯಾಚರಣೆಗೆ ಮಧ್ಯಂತರ ತಡೆ ನೀಡಿದೆ. 

ಈ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಎನ್‌ಜಿಒ ಸಂಸ್ಥೆ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಮಾರತ್ತಹಳ್ಳಿಯ ಕರಿಯಮ್ಮನ ಅಗ್ರಹಾರ, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ಬೆಳ್ಳಂದೂರು, ವರ್ತೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಜೋಪಡಿಗಳನ್ನು ತೆರವುಗೊಳಿಸಬಾರದೆಂದು ಬಿಬಿಎಂಪಿಗೆ ನಿರ್ದೇಶನ ನೀಡಿತು.

ಬಿಬಿಎಂಪಿ ವಾರ್ಡ್-151ರ ವ್ಯಾಪ್ತಿಯ ಪ್ರದೇಶಗಳಲ್ಲಿನ ಬಡ ಜನರನ್ನು ಅಲ್ಲಿಂದ ಏಕೆ ಖಾಲಿ ಮಾಡಿಸಲಾಗುತ್ತಿದೆ. ಯಾವ ಕಾನೂನಿನಡಿ ಯಾವ ಅಧಿಕಾರ ಬಳಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿ, ಪ್ರಮಾಣ ಪತ್ರ ಸಲ್ಲಿಸುವಂತೆ ಬಿಬಿಎಂಪಿ ಹಾಗೂ ಪೊಲೀಸರಿಗೆ ನಿರ್ದೇಶನ ನೀಡಿತು. ಇಲ್ಲಿನ ಜನರು ಕಡು ಬಡವರಾಗಿದ್ದು, ಉತ್ತರ ಕರ್ನಾಟಕ ಭಾಗದ ರಾಯಚೂರು, ಹುಬ್ಬಳ್ಳಿ, ಧಾರವಾಡ ಮತ್ತು ಅಸ್ಸಾಂ, ಬಿಹಾರ, ತ್ರಿಪುರ ಮತ್ತಿತರ ಭಾಗಗಳಿಂದ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು, ಹತ್ತು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಮನೆಗೆಲಸ, ಕೂಲಿ ಕಾರ್ಮಿಕರಾಗಿರುವ ಈ ಜನರನ್ನು ಅಕ್ರಮ ಬಾಂಗ್ಲಾ ವಲಸಿಗರೆಂಬ ಆರೋಪದಡಿ ಬಿಬಿಎಂಪಿ ಹಾಗೂ ಪೊಲೀಸರು ಜಂಟಿಯಾಗಿ ಜೋಪಡಿಗಳನ್ನು ಖಾಲಿ ಮಾಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದುರ್ಬಲ ಕೂಲಿ ಕಾರ್ಮಿಕರ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಬೇಕು.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಈಗಾಗಲೇ ಕಾರ್ಯಾಚರಣೆಯಲ್ಲಿ ಜೋಪಡಿ ಅಥವಾ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಅರ್ಜಿದಾರರು ಮನವಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News