'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶಿಸಿದ್ದು ದೇಶ ದ್ರೋಹದ ಕೆಲಸವಲ್ಲ: ಸಿದ್ದರಾಮಯ್ಯ

Update: 2020-01-22 18:28 GMT

ಮೈಸೂರು,ಜ.22: ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘದ ನಿರ್ಧಾರ ಅಸಂವಿಧಾನಿಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ರೀತಿ ನಿರ್ಧಾರ ತೆಗೆದುಕೊಳ್ಳಲು ವಕೀಲರ ಸಂಘಕ್ಕೆ ಅವಕಾಶವೇ ಇಲ್ಲ. ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ್ದು ದೇಶ ದ್ರೋಹದ ಕೆಲಸವಲ್ಲ. ಕಾಶ್ಮೀರದಲ್ಲಿ ಇಂದಿಗೂ ತುರ್ತುಪರಿಸ್ಥಿತಿ ಇದೆ. ಅದರಿಂದ ಮುಕ್ತಗೊಳಸಬೇಕೆಂಬ ಭಾವನೆಯಿಂದ ನಳಿನಿ ನಾಮಫಲಕ ಪ್ರದರ್ಶಿಸಿದ್ದಾಳೆ. ಇದರ ವಿರುದ್ಧ ಮೈಸೂರು ವಕೀಲರ ಸಂಘ ವಕಾಲತ್ತು ಹಾಕದೆ ನಿರ್ಣಯ ಕೈಗೊಂಡಿರೋದು ಸರಿಯಲ್ಲ. ಇದನ್ನು ಪ್ರಶ್ನೆ ಮಾಡಿದ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮೇಲೆ ವಕೀಲರಿಂದ ಹಲ್ಲೆಗೆ ಯತ್ನ ನಡೆದಿದೆ. ಇಂತಹ ಗೂಂಡಾಗಿರಿಯನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದರು. 

ರಾಜ್ಯ ಸರ್ಕಾರದಿಂದ ಬಲವಂತವಾಗಿ ರೈತರ ಸಾಲ ವಸೂಲಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಬರದಿಂದ ತತ್ತರಿಸಿರುವ ರೈತರಿಂದ ಬಲವಂತವಾಗಿ ಯಾವುದೇ ಕಾರಣಕ್ಕೂ ಸಾಲ ವಸೂಲಿ ಮಾಡಬಾರದು. ರೈತರು ತಾವಾಗಿಯೇ ಸಾಲ ವಾಪಸ್ ಕೊಟ್ಟರೆ ತೆಗೆದುಕೊಳ್ಳಿ. ಆದರೆ ಅವರಿಂದ ಬಲವಂತವಾಗಿ ವಸೂಲಿ ಮಾಡಬಾರದು. ಒಂದು ವೇಳೆ ವಸೂಲಿ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಬರದ ಕಾರಣಕ್ಕಾಗಿಯೇ ರೈತರಿಂದ ಬಲವಂತ ಸಾಲ ವಸೂಲಿ ಬೇಡವೆಂದು ಹೇಳಿದ್ದೆ. ರಾಜ್ಯ ಸರ್ಕಾರದ  ಈ ನಿಲುವನ್ನು ನಾನು ಖಂಡಿಸುತ್ತೇನೆ ಎಂದರು.

ಬಾಂಗ್ಲ ವಲಸಿಗರ ಶೆಡ್ ಗಳ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಮೊದಲು ಉಳಿದುಕೊಳ್ಳಲು ಸ್ಥಳ ಕೊಟ್ಟವರು ಇವರೆ. ಈಗ ಅವರನ್ನು ಓಡಿಸುವವರು ಇವರೇ. ಇದು ಯಾವ ರೀತಿ ನಿಲುವು. ಇದು ಅವರ ದ್ವಂದ ನಿಲುವನ್ನು ತೋರಿಸುತ್ತದೆ. ಸಿಎಎ ಕಾಯ್ದೆಯಡಿ ಬಾಂಗ್ಲಾ ದಿಂದ ಬಂದವರಿಗೆ ಪೌರತ್ವ ಕೊಡುತ್ತೇವೆ ಎನ್ನುತ್ತಾರೆ. ಈಗ ಅವರನ್ನೇ ಓಡಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News