ಕೊಡಗಿನಲ್ಲಿ ದಿಢೀರ್ ಹೊರ ರಾಜ್ಯದ ಕಾರ್ಮಿಕರ ದಾಖಲೆ ಪರಿಶೀಲನೆ: ಅಸ್ಸಾಂ ಮೂಲದ ಕಾರ್ಮಿಕರಲ್ಲಿ ಆತಂಕ

Update: 2020-01-23 15:11 GMT

► ಸ್ಪಷ್ಟನೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ

ಮಡಿಕೇರಿ, ಜ.23: ಕೊಡಗು ಜಿಲ್ಲೆಯಾದ್ಯಂತ ಕಾಫಿ ತೋಟ ಹಾಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹೊರ ರಾಜ್ಯದ ಕಾರ್ಮಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಕಾರ್ಯಕ್ರಮ ಜಿಲ್ಲಾ ಪೊಲೀಸ್ ಇಲಾಖೆಯಿಂದ ದಿಢೀರ್ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತು. ಇದೇ ಸಂದರ್ಭದಲ್ಲಿ 'ಸಮೀಕ್ಷೆಗೂ ಪೌರತ್ವ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಸಂಬಂಧ ಸೃಷ್ಟಿಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ' ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಜಿಲ್ಲೆಯಲ್ಲಿ ನೆಲೆಸಿರುವ ಹೊರರಾಜ್ಯಗಳ ಕಾರ್ಮಿಕರ ಗುರುತಿನ ಚೀಟಿ ಪರಿಶೀಲನಾ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ವತಿಯಿಂದ ಮೂರು ತಾಲೂಕುಗಳಲ್ಲಿ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ ಸುಮಾರು 5 ಸಾವಿರ ಕಾರ್ಮಿಕರು ಸರಿಯಾದ ದಾಖಲೆಗಳನ್ನು ನೀಡಿದ್ದಾರೆ ಎಂದರು. ಅಂದಾಜು 500 ಮಂದಿ ಅಪೂರ್ಣ ದಾಖಲೆ ಹೊಂದಿರುವ ಕಾರ್ಮಿಕರಿದ್ದು, ಇವರಿಗೆ ಮುಂದಿನ ಒಂದು ವಾರದ ಒಳಗೆ ದಾಖಲೆಯನ್ನು ಹಾಜರುಪಡಿಸುವಂತೆ ತಿಳಸಲಾಗಿದೆ. ಜಿಲ್ಲೆಯಲ್ಲಿ ಹೊರರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಅವಲೋಕಿಸಿ ಜನರಲ್ಲಿ ಮೂಡಿರುವ ಆತಂಕವನ್ನು ದೂರಮಾಡಲು ಕಾರ್ಮಿಕರಿಂದ ಮಾಹಿತಿ ಪಡೆಯಲಾಗಿದೆಯಷ್ಟೇ ಎಂದು ತಿಳಿಸಿದರು.

ಜಿಲ್ಲೆಯ ಕಾಫಿ ತೋಟ, ಹೋಟೆಲ್, ರೆಸಾರ್ಟ್, ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆಲವು ಊಹಾಪೋಹದ ಮಾತುಗಳು ಕೇಳಿ ಬಂದಿತ್ತು. ಜನರಲ್ಲಿ ಮೂಡಿರುವ ಸಂಶಯ ಮತ್ತು ಆತಂಕವನ್ನು ದೂರಮಾಡುವುದಕ್ಕೋಸ್ಕರ ಜಿಲ್ಲೆಯಲ್ಲಿರುವ ಹೊರ ರಾಜ್ಯದ ಕಾರ್ಮಿಕರು ನಮ್ಮ ದೇಶದವರೆ ಎಂದು ಖಾತ್ರಿ ಪಡಿಸುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಎಂದರು.

ಅಸ್ಸಾಂ, ಬಿಹಾರ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿರುವ ಕಾರ್ಮಿಕರು ಇಲ್ಲಿ ನೆಲೆಸಿದ್ದಾರೆ. ಇಂದು ನಡೆಸಿದ ಗುರುತಿನ ಚೀಟಿ ಪರಿಶೀಲನಾ ಕಾರ್ಯಕ್ರಮದಲ್ಲಿ ಕಾರ್ಮಿಕರು ಸಲ್ಲಿಸಿದ ದಾಖಲೆಗಳನ್ನು ಆನ್ ಲೈನ್ ಮೂಲಕ ಖಾತರಿ ಪಡಿಸಿಕೊಳ್ಳಲಾಗಿದೆ. ಎಲ್ಲಾ ದಾಖಲೆಗಳು ಸರಿಯಾಗಿದ್ದು, ಸುಮಾರು 500 ಮಂದಿಯ ದಾಖಲೆ ಅಪೂರ್ಣವಾಗಿತ್ತು. ಪ್ರಮುಖವಾಗಿ ಕಾರ್ಮಿಕರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಮತ ಚೀಟಿಯನ್ನು ಪರಿಗಣಿಸಲಾಯಿತೆಂದು ಎಸ್‌ಪಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರ ನಿರ್ದೇಶನದಂತೆ ಜಿಲ್ಲೆಯ ಮೂರು ತಾಲೂಕುಗಳಾದ ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆಯಲ್ಲಿ ಪೊಲೀಸ್ ಅಧಿಕಾರಿಗಳು ಕಾರ್ಮಿಕರ ಮಾಹಿತಿ ಸಂಗ್ರಹಿಸಿದರು.

ಮಡಿಕೇರಿಯ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಅಧಿಕಾರಿಗಳು ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿದರು. ಸಾವಿರಾರು ಕಾರ್ಮಿಕರು ಸರತಿ ಸಾಲಿನಲ್ಲಿ ನಿಂತು ದಾಖಲೆಗಳನ್ನು ನೀಡಿದರು. ಇಂದು ಬೆಳಗ್ಗೆ ಸುಮಾರು ಎಂಟು ಗಂಟೆಯಿಂದಲೇ ಈ ಕಾರ್ಯಕ್ರಮ ಆರಂಭಗೊಂಡು ಸಂಜೆ ವೇಳೆಗೆ ಮುಕ್ತಾಯಗೊಂಡಿತು. ಆಯಾ ತಾಲೂಕು ಮತ್ತು ಗ್ರಾಮಾಂತರ ವ್ಯಾಪ್ತಿಯ ಪೊಲೀಸರ ಸೂಚನೆಯಂತೆ ತೋಟದ ಮಾಲಕರು, ಕಟ್ಟಡಗಳ ಗುತ್ತಿಗೆದಾರರು ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ಕೂಲಿ ಕೆಲಸಕ್ಕೆ ಬಳಸಿಕೊಳ್ಳುತ್ತಿರುವವರು ದಾಖಲೆ ಪರಿಶೀಲನಾ ಕೇಂದ್ರಕ್ಕೆ ಕಾರ್ಮಿಕರನ್ನು ಖುದ್ದಾಗಿ ಕರೆ ತಂದರು. ಬಂದ ಕಾರ್ಮಿಕರ ಬಳಿ ಇದ್ದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತಚೀಟಿಗಳನ್ನು ಪರಿಶೀಲಿಸಿ ಆನ್ ಲೈನ್ ಮೂಲಕ ಸಂಬಂಧಿಸಿದ ಕಾರ್ಮಿಕರ ದಾಖಲಾತಿ ಸರಿಯಾಗಿದೆಯೇ ಮತ್ತು ದಾಖಲೆಯಲ್ಲಿರುವ ಪ್ರದೇಶದ ನಿವಾಸಿಗಳೇ ಎಂದು ಪರಿಶೀಲಿಸಿದರು.

ದಿಢೀರ್ ಕಾರ್ಯಕ್ರಮ

ಪೊಲೀಸ್ ಇಲಾಖೆ ದಿಢೀರ್ ಆಗಿ ಕಾರ್ಮಿಕರ ಗುರಿತಿನ ಚೀಟಿಯನ್ನು ಪರಿಶೀಲಿಸುವ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡ ಬಗ್ಗೆ ತೋಟದ ಮಾಲಕರಲ್ಲಿ ಗೊಂದಲ ಮೂಡಿತ್ತು. ಎಮ್ಮೆಮಾಡು ಗ್ರಾಮದ ತೋಟದ ಮಾಲಕ ಮಹಮ್ಮದ್ ಅಝರುದ್ದೀನ್ ಅವರ ಪ್ರಕಾರ ನಾಪೋಕ್ಲು ಪೊಲೀಸರು ತಿಳಿಸಿದ ಮೇರೆಗೆ ತಮ್ಮ ಬಳಿ ಕಾರ್ಯ ನಿರ್ವಹಿಸುತ್ತಿರುವ ಅಸ್ಸಾಂ ರಾಜ್ಯದ ಸುಮಾರು 26 ಕಾರ್ಮಿಕರನ್ನು ಮಡಿಕೇರಿಗೆ ಕರೆ ತಂದು ಎಲ್ಲಾ ದಾಖಲೆಗಳನ್ನು ಪೊಲೀಸ್ ಅಧಿಕಾರಿಗಳ ಮುಂದೆ ಹಾಜರು ಪಡಿಸಿದ್ದಾರೆ. ಪೊಲೀಸರು ಬೇರೇನು ಕೇಳಿಲ್ಲವೆಂದು ತಿಳಿಸಿದರು.

ಅಸ್ಸಾಂ ರಾಜ್ಯದ ದರಂಗ್ ಜಿಲ್ಲೆಯ ಗೌಡಂಗ ಗ್ರಾಮದ ದೀನ್ ಇಸ್ಲಾಂ ಅವರು ಮಾತನಾಡಿ, ಕಾಫಿ ಕೊಯ್ಯಲೆಂದು ಕೊಡಗಿಗೆ ಬಂದಿದ್ದೇವೆ, ಇಂದು ಪೊಲೀಸರು ಬರಬೇಕೆಂದು ತಿಳಿಸಿದ ಮೇರೆಗೆ ಮಾಲಕರೊಂದಿಗೆ ಬಂದಿದ್ದೇವೆ ಎಂದರು. ಜೊತೆಯಲ್ಲಿದ್ದ ಎಲ್ಲಾ ಕಾರ್ಮಿಕರು ತಮ್ಮ ಬಳಿ ಇದ್ದ ಅಸ್ಸಾಂ ರಾಜ್ಯದ ಮತಚೀಟಿಯನ್ನು ಪ್ರದರ್ಶಿಸಿದರು.

ನಾಪೋಕ್ಲುವಿನಲ್ಲಿ ಹೆಚ್ಚಿನ ಕಾರ್ಮಿಕರು

ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮ ವ್ಯಾಪ್ತಿಯಲ್ಲಿ ಹೊರ ರಾಜ್ಯದಿಂದ ಬಂದ ಹೆಚ್ಚಿನ ಕಾರ್ಮಿಕರಿದ್ದು, ಇಂದು ಬೆಳಗ್ಗೆ ನೂರಾರು ಸಂಖ್ಯೆಯ ಕಾರ್ಮಿಕರು ನಾಪೋಕ್ಲು ಠಾಣೆಗೆ ಹಾಜರಾಗಿ ನಂತರ ಹತ್ತಾರು ವಾಹನಗಳಲ್ಲಿ ಮಡಿಕೇರಿಗೆ ಆಗಮಿಸಿ ಪೊಲೀಸರೆದುರು ತಮ್ಮ ಗುರುತಿನ ಚೀಟಿಗಳನ್ನು ಹಾಜರುಪಡಿಸಿದರು.

ಅರ್ಥಹೀನ ಕಾರ್ಯಕ್ರಮ

'ಇದೊಂದು ಅರ್ಥಹೀನ ಕಾರ್ಯಕ್ರಮವಾಗಿದ್ದು, ಕಾರ್ಮಿಕರಿಗೆ ವಿನಾಕಾರಣ ತೊಂದರೆ ನೀಡಲಾಗಿದೆಯಷ್ಟೇ, ದಾಖಲೆ ಇಲ್ಲದವರು ಪೊಲೀಸರ ಮುಂದೆ ಹಾಜರಾತ್ತಾರೆಯೇ' ಎಂದು ಸಾಮಾಜಿಕ ಕಾರ್ಯಕರ್ತ ಹಾರೀಸ್ ಪ್ರಶ್ನಿಸಿದ್ದಾರೆ. ನುಸುಳುಕೋರರು ಅಥವಾ ಸಮಾಜ ಘಾತುಕರು ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ, ಆದರೆ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಆತಂಕ ಮೂಡಿಸುವುದನ್ನು ವಿರೋಧಿಸುತ್ತೇವೆ ಎಂದರು. ಈ ಬೆಳವಣಿಗೆಯನ್ನು ಗಮನಿಸಿದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನೇನಾದರು ಅನುಷ್ಠಾನಗೊಳಿಸಿದರೆ ಸಾವಿರಾರು ಸಂಖ್ಯೆಯಲ್ಲಿ ಜನ ದಾಖಲೆಯನ್ನು ಹಾಜರು ಪಡಿಸಲು ಕಾದು ನಿಲ್ಲಬೇಕಾಗುತ್ತದೆ ಎಂದು ಹಾರಿಸ್ ಅಭಿಪ್ರಾಯಪಟ್ಟಿದ್ದಾರೆ.

ಸಂಶಯ ಪಡುವುದು ಸರಿಯಲ್ಲ

ಕೊಡಗಿನ ಪೊಲೀಸರು ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೋ ತಿಳಿದಿಲ್ಲ, ಸರ್ಕಾರ ಆದೇಶ ನೀಡಿತ್ತೇ ಅಥವಾ ಜಿಲ್ಲೆಯ ಶಾಸಕರು ಹೇಳಿದರೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಎಲ್ಲಾ ಕಾರ್ಮಿಕರನ್ನು ಸಂಶಯದಿಂದ ನೋಡುವುದು ಸರಿ ಅಲ್ಲವೆಂದು ಪ್ರಗತಿಪರ ಜನಾಂದೋಲನ ವೇದಿಕೆಯ ಸಂಚಾಲಕ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿ.ಪಿ.ಶಶಿಧರ್ ತಿಳಿಸಿದ್ದಾರೆ.

ಕಾರ್ಮಿಕರನ್ನು ಬಾಂಗ್ಲಾ ದೇಶಿಗರೆಂದು ಸಂಶಯ ಪಡುವುದು ಅಥವಾ ಯಾವುದೋ ಒಂದು ವರ್ಗವನ್ನು ಗುರಿ ಮಾಡುವುದು ಸರಿಯಲ್ಲ. ಹೊರ ರಾಜ್ಯದ ಕಾರ್ಮಿಕರು ಕೊಡಗಿನಲ್ಲಿ ಮಾತ್ರ ಇರುವುದಲ್ಲ, ಪಕ್ಕದ ಜಿಲ್ಲೆಗಳಲ್ಲೂ ಇದ್ದಾರೆ. ಇಲ್ಲಿ ಮಾತ್ರ ಯಾಕೆ ಈ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ ಎಂದು ಅವರು ಪ್ರಶ್ನಿಸಿದರು. ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ತೋಟದ ಮಾಲಕರು ಮತ್ತು ಇತರ ಕ್ಷೇತ್ರಗಳ ಉದ್ಯಮಿಗಳು ಹೊರ ರಾಜ್ಯದ ಕಾರ್ಮಿಕರನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಕೊಡಗಿನಲ್ಲಿದೆ ಎಂದು ಶಶಿಧರ್ ಹೇಳಿದರು.

ಕಡಿಮೆ ಕೂಲಿಗಾಗಿ ಬಳಕೆ

ಅತಿಹೆಚ್ಚು ಕಾಫಿ ಬೆಳೆಯುವ ಕೊಡಗು ಜಿಲ್ಲೆ ಕಳೆದ ಐದು ವರ್ಷಗಳಿಂದ ಹೆಚ್ಚಾಗಿ ಹೊರರಾಜ್ಯದ ಕಾರ್ಮಿಕರನ್ನೇ ಅವಲಂಭಿಸಿದೆ. ಕಾರಣ ಕಡಿಮೆ ಕೂಲಿ, ಕೆಲಸ ಹೆಚ್ಚು. ಸ್ಥಳೀಯ ಕಾರ್ಮಿಕರು 300 ರಿಂದ 400 ವರೆಗೆ ದಿನಗೂಲಿ ಪಡೆದರೆ ಹೊರರಾಜ್ಯಗಳ ಕಾರ್ಮಿಕರು 200 ರಿಂದ 300 ರೂ.ಗಳಿಗೆ ಹೆಚ್ಚು ಗಂಟೆ ದುಡಿಯುತ್ತಾರೆ. ಅಲ್ಲದೆ ಹೊರರಾಜ್ಯದ ಕಾರ್ಮಿಕ ಕುಟುಂಬವಿದ್ದರೆ ಜಿಲ್ಲೆ ಬಿಟ್ಟು ಹೊರ ಹೋಗುವುದಿಲ್ಲ, ಹೆಚ್ಚು ರಜೆ ಇಲ್ಲದೆ ದುಡಿಯುತ್ತಾರೆ ಎನ್ನುವ ಧೈರ್ಯ ತೋಟದ ಮಾಲಕರದ್ದು.

ನುಸುಳುಕೋರರ ವದಂತಿ ಸಮೀಕ್ಷೆಗೆ ಕಾರಣ

ಕೊಡಗಿನ ಗೋಣಿಕೊಪ್ಪದಲ್ಲಿ ಉಗ್ರರ ತರಬೇತಿ ತಾಣವಿದೆ ಎಂದು ಇತ್ತೀಚೆಗೆ ಮಾಧ್ಯಮಗಳ ಮೂಲಕ ವರದಿ ಪ್ರಸಾರವಾದ ಬೆನ್ನಲ್ಲೇ ಕೊಡಗಿನಲ್ಲಿ ನುಸುಳುಕೋರರು ಇದ್ದಾರೆ ಎನ್ನುವ ಊಹಾಪೋಹಗಳಿಗೆ ರೆಕ್ಕೆಪುಕ್ಕಗಳು ಬೆಳೆದಿತ್ತು. ವ್ಯಾಪಾರ ಮತ್ತು ಕಾರ್ಮಿಕರ ರೂಪದಲ್ಲಿ ಸಮಾಜಘಾತುಕ ಶಕ್ತಿಗಳು ಜಿಲ್ಲೆಯನ್ನು ನುಸುಳುತ್ತಿವೆ ಎಂದು ಕೆಲವರು ಗಂಭೀರ ಆರೋಪಗಳನ್ನು ಮಾಡಿದ್ದರು. ಅಲ್ಲದೆ ಗೋಣಿಕೊಪ್ಪದಲ್ಲಿ ಪ್ರತಿಭಟನೆಯೂ ನಡೆದಿತ್ತು, ಕಾರ್ಮಿಕರ ಮೇಲೆ ನಿಗಾ ಇಡುವಂತೆ ಪೊಲೀಸರಿಗೆ ದೂರುಗಳೂ ಬಂದಿದ್ದವು. ಈ ಹಿನ್ನೆಲೆಯಲ್ಲಿ ಜನರಲ್ಲಿ ಮೂಡಿರುವ ಸಂಶಯವನ್ನು ದೂರ ಮಾಡುವುದಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ಕಾರ್ಮಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಎಂದು ಹೇಳಲಾಗುತ್ತಿದೆ.

ಸರ್ಕಾರದ ಆದೇಶವಲ್ಲ

ಈ ಕಾರ್ಯಕ್ರಮದ ಗ್ಗೆ ಯಾರು ಸಂಶಯ ಪಡುವ ಅಗತ್ಯವಿಲ್ಲವೆಂದು ತಿಳಿಸಿದ ಎಸ್‌ಪಿ, ಇದು ಸರ್ಕಾರದ ಆದೇಶವಲ್ಲ. ಬದಲಿಗೆ ಇತ್ತೀಚಿನ ದಿನಮಾನಗಳಲ್ಲಿನ ಬೆಳವಣಿಗೆಗಳನ್ನು ಆಧರಿಸಿ ಮತ್ತು ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆಗಳನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಮಿಕರ ಗುರುತಿನ ಚೀಟಿಗಳ ಪರಿಶೀಲನಾ ಕಾರ್ಯವನ್ನು ಮೊದಲ ಹಂತದಲ್ಲಿ ಮಾಡಲಾಗಿದೆ. ಈ ಕಾರ್ಯಕ್ರಮದಿಂದ ನಿಯಮ ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಎಚ್ಚರಿಕೆಯ ಸಂದೇಶ ನೀಡಿದಂತಾಗಿದೆ ಮತ್ತು ಇದರಲ್ಲಿ ತೊಡಗಿಸಿಕೊಂಡವರು ವಾಪಾಸು ಹೋಗುವ ವಿಶ್ವಾಸವೂ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News