ಆಂಬುಲೆನ್ಸ್‌ಗೆ ದಾರಿ ತೋರಿದ ಬಾಲಕ, ಗೂಳಿಯಿಂದ ತಮ್ಮನನ್ನು ರಕ್ಷಿಸಿದ ಬಾಲಕಿಗೆ ಶೌರ್ಯ ಪ್ರಶಸ್ತಿ

Update: 2020-01-23 15:25 GMT
Photo: twitter.com/CMofKarnataka

ಬೆಂಗಳೂರು, ಜ.23: ಪ್ರಾಣದ ಹಂಗು ತೊರೆದು ಅಪಾಯದಲ್ಲಿದ್ದ ವ್ಯಕ್ತಿಗಳನ್ನು ರಕ್ಷಿಸಿ ಸಾಹಸ ಮೆರೆದಿದ್ದ ಕರ್ನಾಟಕದ ಇಬ್ಬರು, ಪ್ರಸ್ತುತ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇರಾಯನಕುಂಪಿ ಗ್ರಾಮದ 6ನೆ ತರಗತಿ ವಿದ್ಯಾರ್ಥಿ ವೆಂಕಟೇಶ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲಗೋಣ ಗ್ರಾಮದ 4ನೆ ತರಗತಿ ವಿದ್ಯಾರ್ಥಿನಿ ಆರತಿ ಸೇಟ್ ಅವರು ಪ್ರಸಕ್ತ ಸಾಲಿನ ಶೌರ್ಯ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

2019ನೇ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಕೃಷ್ಣಾ ನದಿಗೆ ಬಂದಿದ್ದ ಭಾರಿ ಪ್ರವಾಹದ ವೇಳೆ ಕಾಯಿಲೆಪೀಡಿತ ಮಕ್ಕಳು ಹಾಗೂ ಮಹಿಳೆಯೊಬ್ಬರ ಶವ ಸಾಗಿಸುತ್ತಿದ್ದ ಆಂಬುಲೆನ್ಸ್‌ಗೆ ಜಲಾವೃತವಾಗಿದ್ದ ಸೇತುವೆ ದಾಟಲು ವೆಂಕಟೇಶ್ ನೆರವಾಗಿದ್ದ. ಅಷ್ಟೇ ಅಲ್ಲದೆ, ಎದೆ ಮಟ್ಟದವರೆಗೆ ಜಲಾವೃತವಾಗಿದ್ದ ಸೇತುವೆಯ ಆಚೆಯ ದಡದ ವರೆಗೆ ನೀರಲ್ಲಿ ಆಂಬುಲೆನ್ಸ್‌ನ ಚಾಲಕನಿಗೆ ದಾರಿ ತೋರಿಸಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

2018ರ ಜುಲೈ 13ರಂದು ಎರಡು ವರ್ಷ ವಯಸ್ಸಿನ ತನ್ನ ತಮ್ಮನ ಮೇಲೆ ಗೂಳಿ ದಾಳಿ ನಡೆಸಿದಾಗ ಪ್ರಾಣ ಲೆಕ್ಕಿಸದೆ ರಕ್ಷಣೆಗೆ ಧಾವಿಸಿದ ಆರತಿ ಶೌರ್ಯ ಪ್ರದರ್ಶಿಸಿದ್ದರು.

ಪ್ರದಾನ: ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಣೆಯಾಗಿದ್ದು, ದೇಶದ 22 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಜ.26ರಂದು ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ನಾಡಿನ ಇಬ್ಬರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News