ರಾಜ್ಯವನ್ನು ಅಭಿವೃದ್ಧಿಯ ಶಕ್ತಿ ಕೇಂದ್ರವಾಗಿಸಲು ಬದ್ಧ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-01-23 17:18 GMT
Photo: twitter.com/CMofKarnataka

ದಾವೋಸ್, ಜ.23: ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕವನ್ನು ವೃದ್ಧಿ ಮತ್ತು ಅಭಿವೃದ್ಧಿಯ ಶಕ್ತಿ ಕೇಂದ್ರವಾಗಿ ರೂಪಿಸಲು ಬದ್ಧರಿರುವುದಾಗಿ ತಿಳಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಉದ್ಯಮಿಗಳು ಹಾಗೂ ಹೂಡಿಕೆದಾರರಲ್ಲಿ ಮನವಿ ಮಾಡಿದರು.

ವರ್ಲ್ಡ್ ಎಕನಾಮಿಕ ಫೋರಂ ಸಮಾವೇಶದ ಸಂದರ್ಭದಲ್ಲಿ, ಏರ್ಪಡಿಸಿದ್ದ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯವು ಇನ್ಫೋಸಿಸ್, ಬಯೋಕಾನ್, ವಿಪ್ರೊ ಮತ್ತು ಡೈನಮ್ಯಾಟಿಕ್ಸ್‌ನಂತಹ ಭಾರತೀಯ ಮೂಲದ ಬಹುರಾಷ್ಟ್ರೀಯ ಕಂಪೆನಿಗಳ ನೆಲೆಯಾಗಿದೆ. ರಾಜ್ಯವು ಉತ್ತಮ ಬೆಳವಣಿಗೆ ದರವನ್ನು ಹಿಂದಿನಿಂದಲೂ ದಾಖಲಿಸುತ್ತ ಬಂದಿದ್ದು, ಇದು ರಾಷ್ಟ್ರೀಯ ಬೆಳವಣಿಗೆ ದರಕ್ಕಿಂತ ಹೆಚ್ಚಾಗಿದೆ. ಜೊತೆಗೆ ರಾಜ್ಯದ ನಿರುದ್ಯೋಗ ಪ್ರಮಾಣವೂ ಅತಿ ಕಡಿಮೆಯಿದೆ ಎಂದು ಅವರು ವಿವರಿಸಿದರು.

ಕೇಂದ್ರ ಸರಕಾರವು ರಾಜ್ಯ ಸರಕಾರದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ವಹಿವಾಟು ನಡೆಸಲು ಇರುವ ತೊಡಕುಗಳನ್ನು ನಿವಾರಿಸುತ್ತಾ ಹೂಡಿಕೆಗೆ ಉತ್ತಮ ವಾತಾವರಣ ಸೃಷ್ಟಿಸಲು ನೆರವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೈಗಾರಿಕೆಯ ಅಭಿವೃದ್ಧಿಯ ಮೂಲಕ 21ನೇ ಶತಮಾನದಲ್ಲಿ ನವ ಭಾರತ ನಿರ್ಮಾಣ ಮಾಡಲು ನಮ್ಮನ್ನು ಹುರಿದುಂಬಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಕೈಗಾರಿಕೆಗಳ ಆಶಾದಾಯಕ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಉತ್ಪಾದಕತೆ, ಪ್ರಾದೇಶಿಕ ಅಭಿವೃದ್ಧಿ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿನ ಹೂಡಿಕೆಗೆ ಉತ್ತೇಜನ ನೀಡುವ ಹೊಸ ಕೈಗಾರಿಕಾ ನೀತಿಯನ್ನು ರೂಪಿಸುತ್ತಿದ್ದೇವೆ ಎಂದು ಯಡಿಯೂರಪ್ಪ ವಿವರಿಸಿದರು.

ರಾಜ್ಯದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಸ್ಥಿರ ಉತ್ಪಾದನಾ ವಲಯ ಸೃಷ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಎರಡು ಹಾಗೂ ಮೂರನೆ ಹಂತದ ನಗರಗಳಿಗೆ ಸಂಪರ್ಕವನ್ನು ಸುಧಾರಿಸಲಾಗಿದೆ. ಭೂ ಬ್ಯಾಂಕ್ ಸೃಷ್ಟಿಸಲಾಗಿದೆ. ಆ ಮೂಲಕ ಕರ್ನಾಟಕದ ಬೆಳವಣಿಯ ವೇಗ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ನುಡಿದರು.

ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯವು ಉತ್ಪನ್ನ ಆಧಾರಿತ ಕೈಗಾರಿಕಾ ಕ್ಲಸ್ಟರುಗಳ ಅಭಿವೃದ್ಧಿಗೆ ಕ್ರಮ ವಹಿಸುತ್ತಿದೆ. ಆ ಮೂಲಕ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅವರು ಹೇಳಿದರು

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಮಾತನಾಡಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ, ಆ ಮೂಲಕ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯಾಗಿ ರೂಪಿಸುವ ಪ್ರಧಾನಮಂತ್ರಿ ಕನಸನ್ನು ನನಸಾಗಿಸುವಂತೆ ಉದ್ಯಮಿಗಳಿಗೆ ಮನವಿ ಮಾಡಿದರು. ನೀವು ನಿಮ್ಮ ಉದ್ಯಮವನ್ನು ಭಾರತದ ಎಲ್ಲ ಭಾಗಗಳಲ್ಲಿ ವಿಸ್ತರಿಸಿ, ವಿಶೇಷವಾಗಿ ಕೈಗಾರಿಕೆಗಳಿಗೆ ಪೂರಕ ವಾತಾವರಣವಿರುವ ಕರ್ನಾಟಕದಲ್ಲಿ ಎಂದು ನುಡಿದರು.

ಸಿಐಐ ಅಧ್ಯಕ್ಷ ಹಾಗೂ ಟಯೊಟಾ ಕಿರ್ಲೋಸ್ಕರ್ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಕಿರ್ಲೋಸ್ಕರ್ ಮಾತನಾಡಿದರು. ಮಹೀಂದ್ರ ಗ್ರೂಪ್‌ನ ಆನಂದ್ ಮಹೀಂದ್ರ, ಭಾರತ್ ಫೋರ್ಜ್‌ನ ಬಾಬಾ ಕಲ್ಯಾಣಿ ಮತ್ತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News