ಕಾರವಾರ ಬಂದರು ಅಭಿವೃದ್ಧಿ ಕಾಮಗಾರಿಗೆ ಹೈಕೋರ್ಟ್ ತಡೆ

Update: 2020-01-23 17:26 GMT

ಬೆಂಗಳೂರು, ಜ.23: ಕಾರವಾರ ತಾಲೂಕಿನ ಬೈತ್‌ಕೋಲ್ ಬಂದರಿನಲ್ಲಿ ನಡೆಯುತ್ತಿರುವ ವಾಣಿಜ್ಯ ಅಭಿವೃದ್ಧಿಯ ಎರಡನೆ ಹಂತದ ಕಾಮಗಾರಿ ವಿಸ್ತರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಕುರಿತು ಬೈತ್‌ಕೋಲ್ ಬಂದರು ನಿರಾಶ್ರಿತರ ಯಾಂತ್ರಿಕೃತ, ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಕಾರವಾರದ ಬೈತ್‌ಕೋಲ್ ಬಂದರಿನಲ್ಲಿ ವಾಣಿಜ್ಯ ಅಭಿವೃದ್ಧಿಯ ಎರಡನೆ ಹಂತದ ಕಾಮಗಾರಿಯನ್ನು ವಿಸ್ತರಣೆ ಮಾಡುವುದರಿಂದ ಪರಿಸರ ಹಾಗೂ ಬಂದರಿಗೆ ಧಕ್ಕೆಯಾಗುತ್ತದೆ. ಈ ಕಾಮಗಾರಿಯು ಸಂವಿಧಾನದ ಪರಿಚ್ಛೇದ 19(1)(ಡಿ), 19(1)(ಜಿ), 21, 48-ಎ, 51-ಎ(ಜಿ) ಮತ್ತು 300-ಎ ಗೆ ವಿರುದ್ಧವಾಗಿದೆ. ಹೀಗಾಗಿ, ಈ ಅಭಿವೃದ್ಧಿ ಕಾಮಗಾರಿಗೆ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಕೆಲಕಾಲ ವಕೀಲರ ವಾದ ಆಲಿಸಿದ ನ್ಯಾಯಪೀಠವು ವಾಣಿಜ್ಯ ಅಭಿವೃದ್ಧಿಯ 2ನೆ ಹಂತದ ಕಾಮಗಾರಿಗೆ ವಿಸ್ತರಣೆಗೆ ಮಧ್ಯಂತರ ತಡೆ ನೀಡಿ, ಉತ್ತರ ಕನ್ನಡ ಜಿಲ್ಲೆಯ ಬಂದರು ಕಚೇರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬಂದರು ನಿರ್ದೇಶಕ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News