ಸಿಎಎ ವಿರೋಧಿಸುವವರು ದೇಶದ್ರೋಹಿಗಳು ಎಂದ ಶಾಸಕ ರೇಣುಕಾಚಾರ್ಯ

Update: 2020-01-23 18:08 GMT

ಮೈಸೂರು,ಜ.23: ನಾನೂ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಮೈಸೂರು ಜಿಲ್ಲೆ ನಂಜಗೂಡು ತಾಲೂಕು ಸುತ್ತೂರಿನಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಗುರುವಾರ ಭಾಗವಹಿಸಿ ನಂತರ ಮಾದ್ಯಮದವರೊಂದಿಗೆ ಮಾತನಾಡಿದರು. ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲುವ ವ್ಯಕ್ತಿಗೆ ಅಧ್ಯಕ್ಷನಾಗಬೇಕು ಎಂಬ ಆಸೆ ಇರುತ್ತದೆ. ನಾನು ಅಬಕಾರಿ ಸಚಿವನಾಗಿದ್ದಾಗ ವಿಧಾನಸೌಧ ಮೂರನೇ ಮಹಡಿಯಲ್ಲಿದ್ದ ಅಬಕಾರಿ ಇಲಾಖೆಯನ್ನು ಜನಸಾಮಾನ್ಯರ ಬಳಿ ತೆಗೆದುಕೊಂಡು ಹೋದೆ. ನಕಲಿ ಮದ್ಯ, ಕಳ್ಳಬಟ್ಟಿ ನಿಲ್ಲಿಸಿದೆ. ಅಲ್ಲದೇ ಅಬಕಾರಿ ಬೊಕ್ಕಸ ತುಂಬಿಸಿದೆ ಎಂದರು.

ಶಾಸಕ ರೇಣುಕಾಚಾರ್ಯ ಸಚಿವನಾಗಬೇಕು ಎನ್ನುವುದು ಕಾರ್ಯಕರ್ತರ ಹಾಗೂ ಅಭಿಮಾನಿಗಳ ಒತ್ತಾಯವಾಗಿದೆ. ಸಚಿವನಾದರೆ ಒಳ್ಳೆಯ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸ ಇದೆ. ಉಪಮುಖ್ಯಮಂತ್ರಿ ಸ್ಥಾನ ಬೇಕೋ ಬೇಡವೋ ಎನ್ನುವ ಬಗ್ಗೆ ಯಾರ ಗಮನಕ್ಕೆ ತರಬೇಕು ತಂದಿದ್ದೀನಿ. ಪುನಃ ಆ ವಿಷಯ ಮಾತನಾಡುವುದಿಲ್ಲ ಎಂದರು.

ನನ್ನ ಕ್ಷೇತ್ರದ ಮುಸ್ಲಿಮರಿಗೆ ಮೂಲ ಸೌಕರ್ಯ ಕೊಡುತ್ತೇನೆ. ಆದರೆ, ವಿಶೇಷ ಪ್ಯಾಕೇಜ್ ನೀಡುವುದಿಲ್ಲ. ಮತವನ್ನು ಬೇರೆಯವರಿಗೆ ನೀಡಿ ಅಭಿವೃದ್ಧಿ ವಿಚಾರ ಬಂದಾಗ ನಮ್ಮ ಬಳಿ ಬರುತ್ತಾರೆ. ಅದಕ್ಕಾಗಿ ಮುಸ್ಲಿಮರಿಗೆ ನಾನು ಕೊಡುವುದಿಲ್ಲವೆಂದು ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು.

ಸಿಎಎ ವಿರೋಧಿಸುವವರು ದೇಶದ್ರೋಹಿಗಳು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜನಗಣತಿ ಮಾಡಲು ಅನುದಾನ ನೀಡಲಿಲ್ಲವೇ, ಸಿಎಎಯಿಂದ ಯಾರಿಗೂ ಅಪಾಯವಾಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News