ಆಡಳಿತದಲ್ಲಿ ಕನ್ನಡ ಅನುಷ್ಠಾನ ಕಡ್ಡಾಯಕ್ಕೆ ಸುತ್ತೋಲೆ

Update: 2020-01-24 17:06 GMT

ಬೆಂಗಳೂರು, ಜ.24: ಆಡಳಿತದಲ್ಲಿ ಪರಿಣಾಮಕಾರಿಯಾಗಿ ಕನ್ನಡ ಭಾಷೆ ಅನುಷ್ಠಾನಗೊಳಿಸಬೇಕು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸುತ್ತೋಲೆ ಹೊರಡಿಸಿದೆ.

ಇಂಗ್ಲಿಷ್‌ನಲ್ಲಿ ಬರುವ ಕಡತಗಳನ್ನು ಸಂಬಂಧಪಟ್ಟ ಅಧಿಕಾರಿಗೆ ಮತ್ತು ಸಿಬ್ಬಂದಿಗೆ ಹಿಂತಿರುಗಿಸಿ ಅಂಥವರ ವಿರುದ್ಧ ಜಿಲ್ಲಾ ಮತ್ತು ಉಪ ನೋಂದಣಾಧಿಕಾರಿಗಳು ತಪ್ಪದೇ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಆಡಳಿತದ ಎಲ್ಲ ಹಂತಗಳಲ್ಲಿಯೂ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂಬುದು ಸರಕಾರದ ನಿಲುವು. ಮಾತೃಭಾಷೆ ಇದ್ದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರಗಳು ಸಾಕಷ್ಟು ಬಾರಿ ಆದೇಶಗಳನ್ನು ಹೊರಡಿಸಿದ್ದರೂ ಕೆಲ ಇಲಾಖೆಗಳಲ್ಲಿ ಕನ್ನಡ ಬದಲು ಇಂಗ್ಲಿಷ್ ಬಳಸಲಾಗುತ್ತಿದೆ. ಹೀಗಾಗಿ, ಹೊರ ರಾಜ್ಯಗಳೊಡನೆ ಪತ್ರ ವ್ಯವಹಾರ ಹೊರತುಪಡಿಸಿ, ರಾಜ್ಯದೊಳಗೆ ನಡೆಸುವ ಎಲ್ಲ ಪತ್ರ ವ್ಯವಹಾರವೂ ಕನ್ನಡದಲ್ಲಿಯೇ ಇರಬೇಕು. ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಕನ್ನಡ ಅನುಷ್ಠಾನದ ಬಗ್ಗೆ ಒಲವು ಹೊಂದಿದ್ದಾರೆ. ಅವರಂತೆ ನೀವು ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾಡುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಜ್ಞಾಪನಪತ್ರ ಹೊರಡಿಸಿ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News