ಕೆಪಿಸಿಸಿ ಅಧ್ಯಕ್ಷರ ನೇಮಕ ಬಗ್ಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

Update: 2020-01-24 17:35 GMT

ಮೈಸೂರು,ಜ.24: ಸಮಾಜದಲ್ಲಿ ಶಾಂತಿ, ನೆಮ್ಮದಿ ಇಲ್ಲದ ಕಾರಣಕ್ಕಾಗಿಯೇ ದೇಶದಲ್ಲಿ ಇಷ್ಟೊಂದು ಸಮಸ್ಯೆ ಉದ್ಭವವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಸುತ್ತೂರಿನಲ್ಲಿ ನಡೆಯುತ್ತಿರುವ  ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಸುತ್ತೂರು ಜಾತ್ರಗೆ ಪ್ರತಿವರ್ಷವೂ ಸ್ವಾಮೀಜಿಯವರು ಕರೆಯುತ್ತಾರೆ. ಈ ವರ್ಷವೂ ಕರೆದಿದ್ದಾರೆ. ಅದಕ್ಕಾಗಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ತಡವಾಗುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಖಂಡಿತವಾಗಿಯೂ ಆದಷ್ಟು ಬೇಗ ಇತ್ಯರ್ಥವಾಗುವ ಅವಶ್ಯಕತೆಯಿದೆ. ನಾನೂ ಕೂಡ ವರಿಷ್ಠರ ಜೊತೆ ಮಾತನಾಡಿದ್ದೇನೆ. ಬಹುಶಃ ಮುಂದಿನ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರನ್ನು ದೂರ ಇಡುವ ಉದ್ದೇಶಾನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರಾಗಬೇಕು ಅನ್ನೋದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾವುದೇ ಅಭಿಪ್ರಾಯ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ಆಗಬೇಕು, ಆಗುತ್ತಿದೆ. ಎಲ್ಲರ ಬಗ್ಗೆಯೂ ಪರ-ವಿರೋಧ ಅಭಿಪ್ರಾಯವಿರತ್ತದೆ. ಅದು ಸಹಜ. ಅಂತಿಮ ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದರು.

ನಾಲ್ಕು ಮಂದಿ ಕಾರ್ಯಾಧ್ಯಕ್ಷರಾಗುತ್ತಿರುವುದು ನಿಜಾನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದೆಲ್ಲ ಊಹಾಪೋಹ. ಅಧಿಕೃತವಾಗಿ ಯಾರೂ ಹೇಳಿಲ್ಲ. ಕಾರ್ಯಾಧ್ಯಕ್ಷರು ಹಿಂದೆ ಎಲ್ಲರೂ ಆಗಿದ್ದಾರೆ, ನಾನು ಆಗಿದ್ದೆ, ಶಿವಕುಮಾರ್ ಆಗಿದ್ದರು. ಎಸ್.ಆರ್.ಪಾಟೀಲ್ ಆಗಿದ್ದರು. ಇದು ಹೊಸದೇನಲ್ಲ. ಈ ಚರ್ಚೆಗಳು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ಆಗತಕ್ಕಂತದ್ದೇ ಹೊರತು ಯಾರೂ ಅಧಿಕೃತವಾಗಿ ಹೇಳಿಲ್ಲ. ಈ ಸುದ್ದಿ ಎಲ್ಲಿಂದ ಬಂತೋ ಗೊತ್ತಿಲ್ಲ. ಈ ವಿಚಾರ ಬಹಿರಂಗವಾಗಿ ಚರ್ಚೆಯಾಗುವ ಅವಶ್ಯಕತೆಯಿಲ್ಲ ಎಂದರು.

ಜಾತ್ಯಾತೀತ ವ್ಯವಸ್ಥೆಯಲ್ಲಿ ನಾವಿರಬೇಕು. ಧರ್ಮ, ಜಾತಿ ಆಧಾರಿತವಾಗಿರದೇ ವಿಭಿನ್ನವಾಗಿರಬೇಕು. ಎಲ್ಲರನ್ನೂ ಒಂದೇ ರೀತಿಯಲ್ಲಿ ತಗೊಂಡು ಹೋಗುವ ಕೆಲಸವಾಗಬೇಕು. ಸಮಾಜದಲ್ಲಿ ಶಾಂತಿ ನೆಮ್ಮದಿ ಇಲ್ಲ. ದೇಶದಲ್ಲಿ ಅದಕ್ಕಾಗಿಯೇ ಇಷ್ಟೊಂದು ಸಮಸ್ಯೆಗಳು ಉದ್ಭವವಾಗಿದೆ ಎಂದರು.

ಮಂಗಳೂರು ಬಾಂಬ್ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಹೇಗೆ ಅಂದರೆ ಮುಸ್ಲಿಮರು ಯಾರಾದರೂ ಇದ್ದರೆ ಎಲ್ಲರೂ ಬೀದಿಗೆ ಬಂದು ಬಿಡುತ್ತಾರೆ. ಶೋಭಾ ಕರಂದ್ಲಾಜೆ, ಸಿ.ಟಿ ರವಿ, ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಾರೆ. ಈಗ ಆದಿತ್ಯರಾವ್ ಹೆಸರು ಬಂದ ಕಾರಣ ಅದಕ್ಕೆ ಮಾನಸಿಕ ಅಸ್ವಸ್ಥ ಇರಬೇಕು. ಅವನಿಗೆ ಬೇರೇ ಏನೋ ಅಗಿರಬೇಕು ಅಂತ ಅವರೇ ಹೇಳಿದರು. ತನಿಖೆ ಇನ್ನೂ ಮುಗಿದಿಲ್ಲ. ಎಷ್ಟಿದೆ ನೋಡಿ ವ್ಯತ್ಯಾಸ. ಅವರ ನಡವಳಿಕೆನೇ ಬೇರೆ. ತಪ್ಪು ಯಾರೇ ಮಾಡಿರಲಿ. ಯಾರನ್ನೂ ರಕ್ಷಿಸಬಾರದು. ಇಂತಹ ಕೃತ್ಯಗಳಿಗೆ ಅವರು ಯಾರೇ ಅಗಿರಲಿ ಕ್ರಮ ವಹಿಸುವುದು ಮುಖ್ಯ. ರಾಜಕೀಯ ಬಣ್ಣ ಕಟ್ಟಲು ಹೋದರೆ ಒಳ್ಳೆಯದಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News