'ಫ್ರೀ ಕಾಶ್ಮೀರ್' ಭಿತ್ತಿಪತ್ರ ವಿಚಾರ: ಯುವತಿಯ ಜಾಮೀನು ಅರ್ಜಿ ವಿಚಾರಣೆ ಜ.27ಕ್ಕೆ ಮುಂದೂಡಿಕೆ

Update: 2020-01-24 18:00 GMT

ಮೈಸೂರು,ಜ.24: ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ್' ಭಿತ್ತಿಪತ್ರ ಹಿಡಿದಿದ್ದ ನಳಿನಿ ಬಾಲಕುಮಾರ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾದೀಶರು ಜ.27 ರ ಸೋಮವಾರಕ್ಕೆ ಅದೇಶ ಮುಂದೂಡಿದ್ದಾರೆ.

ಮೈಸೂರಿನ ಜಿಲ್ಲಾ 2 ನೇ ಸೆಷನ್ಸ್ ನ್ಯಾಯಾಲದಲ್ಲಿ ಶುಕ್ರವಾರ ಬೆಳಗ್ಗೆ ನ್ಯಾಯಾಲಯ ಕಲಾಪ ಆರಂಭವಾಗುತ್ತಿದ್ದಂತೆ ನಳಿನಿ ಪರ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ನ್ಯಾಯಾಧೀಶರು ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡರು. ಸರ್ಕಾರಿ ವಕೀಲ ಆನಂದಕುಮಾರ್ ವಾದಿಸಿ, ದೇಶದ ಸದ್ಯದ ಪರಿಸ್ಥಿತಿಯಲ್ಲಿ 'ಫ್ರೀ ಕಾಶ್ಮೀರ್' ದೇಶದ್ರೋಹದ ಅರ್ಥ ನೀಡುತ್ತದೆ. ಲೋಕಸಭೆಯಲ್ಲಿಯಲ್ಲಿ 370 ಆರ್ಟಿಕಲ್ ಅಂಗೀಕಾರವಾಗಿದೆ. ಇಂತಹ ಸಂದರ್ಭದಲ್ಲಿ 'ಫ್ರೀ ಕಾಶ್ಮೀರ್' ನಾಮ ಫಲಕ ಹಿಡಿದಿರುವುದು ಅಕ್ಷಮ್ಯ ಅಪರಾಧ ಜೊತೆಗೆ ದೇಶಕ್ಕೆ ದ್ರೋಹ ಮಾಡಿದ ಹಾಗೆ ಎಂದು ಹೇಳಿದರು. “ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಕಟ ಮಾತೆ” ಎಂಬ ಕುವೆಂಪು ಅವರ ಕವಿತೆಯನ್ನು ವಾಚಿಸಿ ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶವಾಗುವ ಸಂಭವವಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸುಧೀರ್ಘ ವಾದವನ್ನು ಮಂಡಿಸಿದರು.

ನಳಿನಿ ಪರ ವಕಾಲತ್ತು ವಹಿಸಿ ಬೆಂಗಳೂರಿನ ವಕೀಲ ಜಗದೀಶ್ ಮಾದ ಮಂಡಿಸಿ, “ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದೂ ಕ್ರೈಸ್ತ ಮುಸಲ್ಮಾನ. ಪಾರಸಿಕ ಜೈನರ ಉದ್ಯಾನ” ಎಂಬ ಸಾಲುಗಳನ್ನು ಮುಂದುವರೆಸಿ ಮಾತನಾಡಿದರು. ಲೋಕಸಭೆಯಲ್ಲಿ ಆರ್ಟಿಕಲ್ 370 ಅಂಗೀಕಾರವಾಯಿತು ಎಂದಾಕ್ಷಣ ನಾವು ಒಪ್ಪಲು ಸಾಧ್ಯವಿಲ್ಲ, ಲೋಕಸಭೆಯಲ್ಲಿ ಶೇ.42% ಕ್ರಿಮಿನಲ್ ಹಿನ್ನಲೆಯುಳ್ಳವರೆ ಇದ್ದು, ಅವರ ನಿರ್ಣಯಕ್ಕೆ ಬೆಲೆಯಿಲ್ಲ, ನಮಗೆ ಲೋಕಸಭೆಗಿಂತ ಸಂವಿಧಾನ ಮುಖ್ಯ, ಸಂವಿಧಾನಕ್ಕೆ ನಾವು ಬೆಲೆ ಕೊಡುತ್ತೇವೆ. ಆರ್ಟಿಕಲ್ 370 ಸುಪ್ರೀಂ ಕೋರ್ಟ್‍ನಲ್ಲಿ ಇದೆ. ಆ ವಿಚಾರಣೆಯ ತೀರ್ಪು ಬಂದ ನಂತರ ನಾವು ಒಪ್ಪುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ನಳಿನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ ಎಂದು ವಾದ ಮಂಡಿಸಿದರು.

ಅದೇ ರೀತಿ ಮಂಡ್ಯದಿಂದ ಆಗಮಿಸಿದ್ದ ವಕೀಲ ಬಿ.ಟಿ.ವಿಶ್ವನಾಥ್, ಮೈಸೂರಿನ ಬಾಬು ರಾಜ್, ಪ್ರಸನ್ನ, ಆಸ್ಮ ಪರ್ವಿನ್, ಮಂಜುನಾಥ್ ಅವರು ನಳಿನಿ ಪರ ವಾದ ಮಂಡಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಜಾಮೀನು ಅರ್ಜಿಯ ಆದೇಶವನ್ನು ಜ.27ರ ಸೋಮವಾರಕ್ಕೆ ಮುಂದೂಡಿದರು.

ಎರಡು ಗಂಟೆ ವಾದ ಮಂಡಿಸಿದ ಸರ್ಕಾರಿ ವಕೀಲ: ಸರ್ಕಾರಿ ವಕೀಲ ಆನಂದ ಕುಮಾರು ಸುಧೀರ್ಘ ಎರಡು ಗಂಟೆ ವಾದ ಮಂಡಿಸಿ, ನಳಿನಿಗೆ ಜಾಮೀನು ನೀಡಿದರೆ ಯಾವ ಯಾವ ಹಂತದಲ್ಲಿ ಸಾಕ್ಷ್ಯ ನಾಶವಾಗುತ್ತದೆ. ಜೊತೆಗೆ ಇದೇ ರೀತಿಯ ಪ್ರಕರಣಗಳು ಮತ್ತಷ್ಟು ಹೆಚ್ಚಾಗಬಹುದು. ಹಾಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ಹೇಳಿದರು. ಇದೇ ವೇಳೆ ಸುಮಾರು ನಾಲ್ಕು ಬಾರಿ ನೀರು ಕುಡಿದು, ನಗುತ್ತಲೆ ತಮ್ಮ ವಾದವನ್ನು ಮಂಡಿಸಿದರು.

ಕಿಕ್ಕಿರಿದು ತುಂಬಿದ್ದ ಕೋರ್ಟ್ ಆವರಣ: ನಳಿನಿ ಪರ ಜಾಮೀನು ಅರ್ಜಿ ವಿಚಾರಣೆ ಸಂಬಂಧ ಜಿಲ್ಲಾ 2ನೇ ಸೆಷನ್ಸ್ ಕೋರ್ಟ್ ಆವರಣದಲ್ಲಿ ಶುಕ್ರವಾರ ಬೆಳಗ್ಗೆಯೇ ವಕೀಲರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಾದರೂ ನ್ಯಾಯಧೀಶರು ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ನಂತರ ಮಧ್ಯಾಹ್ನ ಆಗಮಿಸಿದ ವಕೀಲರು, ಸಾರ್ವಜನಿಕರು ಮತ್ತು ಮೈಸೂರು ವಿ.ವಿ. ವಿದ್ಯಾರ್ಥಿಗಳು ಜಾಮೀನು ಆದೇಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದರು.

ವಕೀಲರ ಸಹಕಾರಕ್ಕೆ ಸಂತಸ: ನಳಿನಿ ಪರ ವಕಾಲತ್ತು ವಹಿಸಬಾರದು ಎಂಬ ತೀರ್ಮಾನವನ್ನು ಮೈಸೂರು ವಕೀಲರ ಸಂಘ ನಿರ್ಧರಿಸಿದ್ದ ಬೆನ್ನಲ್ಲೇ ಬೆಂಗಳೂರಿನ ವಕೀಲರು ವಕಾಲತ್ತು ವಹಿಸಲು ನಿರ್ಧರಿಸಿ ಆಗಮಿಸಿದ್ದರು. ಇದೇ ವೇಳೆ ಬೆಂಗಳೂರಿನಿಂದ ಆಗಮಿಸಿದ್ದ ವಕೀಲ ಜಗದೀಶ್ ಮಾತನಾಡಿ, ನಮ್ಮ ಸಹೋದ್ಯೋಗಿ ವಕೀಲರು ನಳಿನಿ ಪರ ವಾದ ಮಂಡಿಸಲು ಅಸಹಕಾರ ತೋರಿ ತೊಂದರೆ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಇಲ್ಲಿನ ವಕೀಲರು ಯಾವುದೇ ರೀತಿಯಲ್ಲೂ ತೊಂದರೆ ನೀಡಲಿಲ್ಲ, ಕೋರ್ಟ್ ಒಳಗೆ ಒಂದು ರೀತಿಯಲ್ಲಿ ಸಂತಸದ ಮತ್ತು ಉತ್ತಮ ವಾತಾವರಣ ನಿರ್ಮಾಣವಾಗಿತ್ತು. ಹಾಗಾಗಿ ಮೈಸೂರಿನ ವಕೀಲರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ನಳಿನಿ ಪರ ವಕಾಲತ್ತಿಗೆ ಸಹಿ ಹಾಕಿದ್ದ ಮೈಸೂರಿನ ಸುಮಾರು 28 ಮಂದಿ ವಕೀಲರು ವಕಾಲತ್ತನ್ನು ಹಿಂಪಡೆದರು. ಅದೇ ರೀತಿ ವಕೀಲ ಬಾಬು ರಾಜ್ ನೇತೃತ್ವದ ಮೈಸೂರಿನ 28 ವಕೀಲರು ನಳಿನಿ ಪರ ವಕಾಲತ್ತು ವಹಿಸಿದರು.

ಇದೇ ವೇಳೆ ವಕೀಲರಾದ ಮಂಜುಳಾ ಮಾನಸ, ಬಾಬುರಾಜ್, ಅನಿಸ್ ಪಾಷಾ, ಮಂಜುನಾಥ್, ಬಿ.ಟಿ.ವಿಶ್ವನಾಥ್, ಪುನೀತ್, ಸೇರಿದಂತೆ ನೂರಾರು ವಕೀಲರು ಹಾಜರಿದ್ದರು.

ಕೋರ್ಟ್ ಸುತ್ತಾ ಬಿಗಿ ಬಂದೋಬಸ್ತ್: 'ಫ್ರೀ ಕಾಶ್ಮೀರ್' ವಿಚಾರಣೆ ಸಂಬಂಧ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯುತ್ತಿರುವುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕೋರ್ಟ್ ಸುತ್ತ ಎಸಿಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬೆಳಗ್ಗೆ ಕೋರ್ಟ್ ಆವರಣದೊಳಗೆ ಹೋಗಲು ಮೈಸೂರು ವಿ.ವಿ.ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಲಿಲ್ಲ. ಯಾವುದೇ ತೊಂದರೆ ಆಗದಂತೆ ಪೊಲೀಸರು ನಿಗಾ ವಹಿಸಿದ್ದರು. 

ನಳಿನಿ ಪರ ವಕಾಲತ್ತು ಹಾಕದಿರಲು ಮೈಸೂರು ವಕೀಲರ ಸಂಘ ನಿರ್ಧರಿಸಿರುವ ಹಿನ್ನಲೆಯಲ್ಲಿ ಬೆಂಗಳೂರು, ದಾವಣಗೆರೆ ಮತ್ತು ಶಿವಮೊಗ್ಗದ 150ಕ್ಕೂ ಹೆಚ್ಚು ವಕೀಲರು ವಕಾಲತ್ತಿಗೆ ಸಹಿ ಹಾಕಿದ್ದಾರೆ. ಜೊತೆಗೆ ಮೈಸೂರಿನ ಹಲವು ವಕೀಲರು ವಕಾಲತ್ತಿಗೆ ಸಹಿಹಾಕಿದ್ದು, ವಿಚಾರಣೆ ನಡೆಯಲಿದೆ. ಮೈಸೂರು ವಕೀಲರ ಸಂಘದ ನಿರ್ಣಯಕ್ಕೆ ವಿರುದ್ಧವಾಗಿ ವಕೀಲರು ವಕಾಲತ್ತು ವಹಿಸಿರುವ ಹಿನ್ನಲೆಯಲ್ಲಿ ನ್ಯಾಯಾಲಯದ ಸುತ್ತ ಎಸಿಪಿ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ.

ನಳಿನಿ ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ, ಅವರಿಗೆ ಮಧ್ಯಂತರ ಜಾಮೀನು ನೀಡಿರುವುದು ಸದ್ಯದ ಮಟ್ಟಿಗೆ ಒಳ್ಳೆಯದು, ಆದರೆ ಅವರ ಮಾನಸಿಕ ಸ್ಥಿತಿ ಗಟ್ಟಿಗೊಳ್ಳಲು ನಿರೀಕ್ಷಣಾ ಜಾಮೀನು ಅಗತ್ಯ.
-ಅನೀಸ್ ಪಾಷ, ವಕೀಲರು, ಶಿವಮೊಗ್ಗ

ಭಾವುಕರಾದ ವಕೀಲರು
ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ವಕೀಲೆ ಆಸ್ಮ ಪರ್ವೀನ್ ಮಂಡಿಸಿದ ವಾದದಿಂದ ವಕೀಲರುಗಳು ಭಾವುಕರಾದ ಘಟನೆ ನಡೆಯಿತು.

ನಳಿನಿ ಪರ ವಕಾಲತ್ತು ವಹಿಸಿರುವ ಮೈಸೂರಿನ ಆಸ್ಮ ಪರ್ವಿನ್, ನಾನು ಮೈಸೂರಿನವಳು. ನನ್ನ ಗಂಡ ಕೂಡ ಇಲ್ಲಿಯವರೆ, ನಮಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ನನ್ನ ಗಂಡ ವಿಜ್ಞಾನಿ, ಕಾಶ್ಮೀರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 6 ತಿಂಗಳಿನಿಂದ ಅವರ ನೇರ ಸಂಪರ್ಕ ಇಲ್ಲದೆ ನನ್ನ ಮಕ್ಕಳು ಕಂಗಾಲಾಗಿದ್ದಾರೆ ಎಂದು ಹೇಳುತ್ತಿದ್ದಂತೆ ಕೋರ್ಟ್ ನಲ್ಲಿ ನಿಶ್ಯಬ್ದ ವಾತಾವರಣ ನಿರ್ಮಾಣವಾಯಿತು.

ನನ್ನ ಮಕ್ಕಳು ತಂದೆ ಜೊತೆ ಮಾತನಾಡಲು ಇಂಟರ್ ನೆಟ್ ಸಂಪರ್ಕವಿಲ್ಲದೆ ಆತಂಕಕ್ಕೊಳಗಾಗಿದ್ದಾರೆ. ತಂದೆಯ ಮುಖವನ್ನು ನೋಡಿ ಮಾತನಾಡದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ಹಲವು ಸ್ನೇಹಿತರ ಕುಟುಂಬದವರು ವಿದೇಶದಲ್ಲಿದ್ದಾರೆ. ಅವರು ನಿತ್ಯ ಅವರ ಜೊತೆ ಇಂಟರ್ ನೆಟ್ ಮೂಲಕ ಜೊತೆಯಲ್ಲಿಯೇ ಇದ್ದೇವೇನೋ ಎಂಬ ಭಾವನೆಯಲ್ಲಿ ಮಾತನಾಡುತ್ತಾರೆ. ಆದರೆ ನಮ್ಮ ದೇಶದಲ್ಲೇ ಇರುವ ನನ್ನ ಗಂಡನ ಜೊತೆ ನನ್ನ ಮಕ್ಕಳು ಮಾತನಾಡದೆ ವಂಚಿತರಾಗಿದ್ದಾರೆ ಎಂದು ಹೇಳುತ್ತಿದ್ದಂತೆ ಭಾವುಕರಾದರು.

ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ನನ್ನ ಗಂಡ ವಿವರಿಸುತ್ತಾರೆ. ಅಲ್ಲಿ ಅವರಿಗೆ ಬೇಕಾದ ಆಹಾರ ತಿನ್ನಲು ಸಾಧ್ಯವಾಗುತ್ತಿಲ್ಲ. ಅವರಿಗೆ ಬೇಕಾದ ರೀತಿಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ, ಇಂತಹ ಸಂದರ್ಭದಲ್ಲಿ ನಾವು ಕಾಶ್ಮೀರದ ಪರಿಸ್ಥಿತಿ ಕುರಿತು ಏನನ್ನಬೇಕು, ಇದು ಹೇಗೆ ದೇಶದ್ರೋಹವಾಗುತ್ತದೆ ಎಂದು ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News