ವಾರದೊಳಗೆ ಸಂಪುಟ ವಿಸ್ತರಣೆ: ಡಿಸಿಎಂ ಲಕ್ಷ್ಮಣ ಸವದಿ

Update: 2020-01-25 12:05 GMT

ಬೆಳಗಾವಿ, ಜ.25: ಧನುರ್ಮಾಸ ಮುಗಿದಿದ್ದು, ವಾರದೊಳಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಜರುಗಲಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಒಂದು ವಾರದೊಳಗೆ ಪೂರ್ಣಗೊಳ್ಳಲಿದೆ. ಧನುರ್ಮಾಸ ಕಳೆದಿರುವುದರಿಂದ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಸಿದ್ಧತೆ ನಡೆಸಿದ್ದಾರೆ. ಬಿಜೆಪಿ ವರಿಷ್ಠರ ಅಭಿಪ್ರಾಯ ಸಂಗ್ರಹಿಸಿಯೇ ಸಂಪುಟ ವಿಸ್ತರಿಸಲಿದ್ದಾರೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಯಾರಿಗೆ ಸಚಿವ ಸ್ಥಾನ ನೀಡಬೇಕು, ಬಿಡಬೇಕು ಎಂಬುವುದನ್ನು ಮುಖ್ಯಮಂತ್ರಿ ನಿರ್ಣಯಿಸಲಿದ್ದಾರೆ. ಇನ್ನು, ವಿಧಾನ ಪರಿಷತ್ ಸದಸ್ಯತ್ವ ನೀಡುವಂತೆ ಆರ್.ಶಂಕರ್ ಕೇಳುವುದು ತಪ್ಪಲ್ಲ. ಎಲ್ಲರಿಗೂ ಅಧಿಕಾರ, ಅಂತಸ್ತು, ಕಾರ್ಯ ಮಾಡಬೇಕೆಂಬ ಇಚ್ಛಾಶಕ್ತಿ ಇರುತ್ತದೆ ಎಂದರು.

ನಾನು ಮೊದಲಿನಿಂದ ಪಕ್ಷದಲ್ಲಿದ್ದೇನೆ, ಮುಂದೆಯೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರು ರಾಜೀನಾಮೆ ಕೊಟ್ಟಿದ್ದಕ್ಕೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಿದೆ. ನಮಗೆ ಸ್ಥಾನಮಾನ ನೀಡಿ ಎಂದು ಅವರಿಬ್ಬರೂ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದು, ಆಡಳಿತ ಪಕ್ಷವನ್ನು ಟೀಕಿಸುವುದು ಅವರ ಕೆಲಸ. ತಮ್ಮ ಕರ್ತವ್ಯವನ್ನು ಸಿದ್ದರಾಮಯ್ಯ ನಿಭಾಯಿಸುತ್ತಿದ್ದಾರೆ ಎಂದು ಕುಟುಕಿದರು.

ಮಂಡ್ಯದಲ್ಲಿ ನಕಲಿ ಬೀಜ ವಿತರಣೆಯಿಂದ ರೈತರಿಗೆ ಹಾನಿ ಆಗಿರುವ ವಿಚಾರ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸವದಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News