ವಿವಾದಿತ ಹೇಳಿಕೆ ಆರೋಪ: ಶಾಸಕ ರೇಣುಕಾಚಾರ್ಯ ವಿರುದ್ಧ ದೂರು ನೀಡಿದ ಎಸ್‌ಡಿಪಿಐ

Update: 2020-01-25 12:57 GMT

ಬೆಂಗಳೂರು, ಜ.25: ಮುಸ್ಲಿಮ್ ಸಮುದಾಯ ಹಾಗೂ ಮಸೀದಿ ಕುರಿತು ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಗೆ ಎಸ್‌ಡಿಪಿಐ ದೂರು ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್, ನನ್ನ ಕ್ಷೇತ್ರದಲ್ಲಿರುವ ಮುಸ್ಲಿಮರ ಅಭಿವೃದ್ಧಿಗಾಗಿ ಕೆಲಸ ಮಾಡುವುದಿಲ್ಲ, ಅವರು ನನಗೆ ಮತ ಹಾಕಲಿಲ್ಲ. ಮಸೀದಿ ಮದರಸಗಳಲ್ಲಿ ಶಸ್ತ್ರಾಸ್ತಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿರುವುದು ಖಂಡನೀಯ ಎಂದರು.

ವಿವಾದಿತ ಹೇಳಿಕೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರೇಣುಕಾಚಾರ್ಯ ಧರ್ಮಗಳ ನಡುವೆ ದ್ವೇಷ ಹಾಗೂ ಅಪನಂಬಿಕೆ ಹುಟ್ಟಿಸುತ್ತಿದ್ದು, ಮತೀಯ ಹಿಂಸಾಚಾರಗಳಿಗೆ ಪ್ರಚೋದನೆ ನೀಡಿದ್ದಾರೆ ಎಂದರು.

ಮತ ಹಾಕದ ಮುಸ್ಲಿಮರ ಅಭಿವೃದ್ಧಿ ಮಾಡುವುದಿಲ್ಲ ಎನ್ನುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ. ಹಾಗಾಗಿ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News