ಸಿಎಎ-ಎನ್‌ಆರ್‌ಸಿ ವಿರೋಧಿಸಿ ಮಡಿಕೇರಿಯಲ್ಲಿ ಮುಸ್ಲಿಂ ಜಮಾಅತ್‍ಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹ

Update: 2020-01-25 13:00 GMT

ಮಡಿಕೇರಿ, ಜ.25: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಮತ್ತು ಪೌರತ್ವ ನೋಂದಣಿ(ಎನ್‌ಆರ್‌ಸಿಸಿ)ಯನ್ನು ವಿರೋಧಿಸಿ ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್‍ಗಳ ಒಕ್ಕೂಟ ನಗರದಲ್ಲಿ ಧರಣಿ ಸತ್ಯಾಗ್ರಹ ನಡೆಸಿತು.

ನಗರದ ಗಾಂಧಿ ಪ್ರತಿಮೆ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಎನ್‍ಆರ್‍ಸಿ, ಸಿಎಎ ವಿರುದ್ಧ ದೇಶಾದ್ಯಂತ ನಿರಂತರ ಹೋರಾಟಗಳು ನಡೆಯುತ್ತಿದ್ದು, ಜಾತ್ಯತೀತ ಮನೋಭಾವನೆ ಹೊಂದಿರುವ ಪ್ರತಿಯೊಬ್ಬರು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಇದರ ಭಾಗವಾಗಿ ಮುಸ್ಲಿಂ ಜಮಾಅತ್‍ಗಳ ಒಕ್ಕೂಟ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಮೂರೂ ತಾಲೂಕುಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು. ಕೇಂದ್ರ ಸರ್ಕಾರ ಎನ್‍ಆರ್‍ಸಿ, ಸಿಎಎ ಕಾಯ್ದೆಯನ್ನು ಕೈಬಿಡುವವರೆಗೆ ನಿರಂತರ ಪ್ರತಿಭಟನೆಗಳು ನಡೆಯಲಿವೆ ಎಂದು ತಿಳಿಸಿದರು.

ಒಕ್ಕೂಟದ ಉಪಾಧ್ಯಕ್ಷ ಪಿ.ಎಂ.ಖಾಸಿಂ ಮಾತನಾಡಿ, ಡಾ.ಬಿ.ಆರ್.ಅಬೇಂಡ್ಕರ್ ಅವರು ನೀಡಿದ ಸಂವಿಧಾನವನ್ನು ಕೇಂದ್ರ ಸರ್ಕಾರದ ಇಬ್ಬರು ನಾಯಕರು ನಾಶಪಡಿಸಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು. ಸರ್ವ ಧರ್ಮೀಯರಿಂದ ಕೂಡಿರುವ ದೇಶದಲ್ಲಿ ಎನ್‍ಆರ್‍ಸಿ, ಸಿಎಎ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಕೋಮು ಸೌಹಾರ್ದತೆಯನ್ನು ಹಾಳುಗೆಡವಲಾಗುತ್ತಿದ್ದು, ದೇಶದ ಪ್ರತಿಯೊಬ್ಬ ನಾಗರೀಕ ಇದನ್ನು ಖಂಡಿಸಬೇಕು ಎಂದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರಿಸಿದ್ದ ಬಾಂಬರ್ ಆದಿತ್ಯ ರಾವ್‍ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ಖಾಸಿಂ ಆರೋಪಿಸಿದರು. ಈ ಕೃತ್ಯವನ್ನು ಒಬ್ಬ ಮುಸ್ಲಿಮ್ ವ್ಯಕ್ತಿ ಮಾಡಿದ್ದರೆ ಧರ್ಮದ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸಲಾಗುತ್ತಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರಕರಣದ ಹಿಂದೆ ಕಾಣದ ಕೈಗಳಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಬಹುಜನ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ಮಾತನಾಡಿ, ದೇಶದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಾದ ಕೇಂದ್ರ ಸರ್ಕಾರ ಎನ್‍ಆರ್‍ಸಿ, ಸಿಎಎ ಕಾಯ್ದೆಯನ್ನು ಜಾರಿಗೆ ತಂದು ದೇಶದಲ್ಲಿ ಅಶಾಂತಿ ಮೂಡಿಸುತ್ತಿದೆ ಎಂದು ಆರೋಪಿಸಿದರು. ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ ಸಂವಿಧಾನಕ್ಕೆ ಹಾಗೂ ರಾಷ್ಟ್ರದ ಜಾತ್ಯತೀತ ಪರಂಪರೆಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ ಅವರು ಈ ಕಾಯ್ದೆಯನ್ನು ತಕ್ಷಣ ಕೈಬಿಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಸದಸ್ಯರಾದ ಮನ್ಸೂರ್, ಮುಸ್ತಫ, ಬಾಪು, ಅಬ್ದುಲ್ ಅಡ್ಕರ್, ಹಂಸ ಕೊಟ್ಟಮುಡಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News