ಗಾಂಧಿಯನ್ನು ಹತ್ಯೆ ಮಾಡಿದವರಿಗೆ ನಾನ್ಯಾವ ಲೆಕ್ಕ ?: ಮಾಜಿ ಸಿಎಂ ಕುಮಾರಸ್ವಾಮಿ

Update: 2020-01-25 14:33 GMT

ಬೆಂಗಳೂರು, ಜ.25: ಮಹಾತ್ಮ ಗಾಂಧೀಜಿಯನ್ನೆ ಹತ್ಯೆ ಮಾಡಿದವರಿಗೆ ನಾನು ಯಾವ ಲೆಕ್ಕ. ಇಂತಹ ಗೊಡ್ಡು ಬೆದರಿಕೆಗಳಿಗೆಲ್ಲ ನಾನು ಬೆದರುವುದಿಲ್ಲ. ನನ್ನ ದೇಹಕ್ಕೆ ಸಣ್ಣ ದೌರ್ಜನ್ಯವಾದರೂ ಅವರು ಸುಟ್ಟು ಭಸ್ಮವಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಹಿಡನ್ ಅಜೆಂಡಾ ಹಾಗೂ ಅದರ ಅಂಗ ಪಕ್ಷಗಳ ನಡವಳಿಕೆಯನ್ನು ಬಹಿರಂಗಪಡಿಸುವಲ್ಲಿ ನಾನು ಮುಂಚೂಣಿಯಲ್ಲಿದ್ದೇನೆ. ಇವರು ಒಡ್ಡುವಂತಹ ಬೆದರಿಕೆಗಳಿಗೆಲ್ಲ ಹೆದರಿ ನಾನು ವೌನಕ್ಕೆ ಶರಣಾಗುವುದಿಲ್ಲ ಎಂದರು.

ಇದರ ಹಿಂದೆ ಯಾರಿದ್ದಾರೆ ಅನ್ನೋದು ನನಗೆ ಗೊತ್ತು. ಬಿಜೆಪಿ ಪಕ್ಷದ ಅಂಗ ಪಕ್ಷಗಳಲ್ಲಿ ಇರುವ ಭಯೋತ್ಪಾದಕರ ನಡವಳಿಕೆಗಳು ನನಗೆ ಗೊತ್ತಿದೆ. ಅತ್ಯಂತ ಜಾಗರೂಕತೆಯಿಂದ ಅವರು ನಡೆಸುವ ಚಟುವಟಿಕೆಗಳನ್ನು ನಾನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಜರ್ಮನಿಯಲ್ಲಿ ನಾಝಿ ಚಟುವಟಿಕೆ ಆರಂಭವಾಗದಲೇ ಇಲ್ಲಿ ಆರೆಸೆಸ್ಸ್ ಸಂಘಟನೆ ಹುಟ್ಟಿಕೊಂಡಿತು. ಆರೆಸೆಸ್ಸ್ ಹಾಗೂ ನಾಝಿ ಸಂಘಟನೆಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಮಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ನಾನು ಸತ್ಯಾಂಶವನ್ನು ಜನತೆಯ ಮುಂದೆ ಇಡಲು ಪ್ರಯತ್ನಿಸಿದಾಗ ಬಿಜೆಪಿಯ ಕೆಲವು ನಾಯಕರು, ನನ್ನನ್ನು ಪಾಕಿಸ್ತಾನದ ಪರವಾಗಿ ಮಾತನಾಡುವವನು, ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು.

ನನ್ನ ಕರ್ಮಭೂಮಿ ಈ ನೆಲದ ಮಣ್ಣು. ನಾನೇಕೆ ಪಾಕಿಸ್ತಾನಕ್ಕೆ ಹೋಗಲಿ, ಪಾಕಿಸ್ತಾನದ ಬಗ್ಗೆ ಪ್ರತಿದಿನ ಭಜನೆ ಮಾಡುವವರು ಇವರು. ಪಾಕಿಸ್ತಾನದ ಹೆಸರು ಹೇಳಿಕೊಂಡೆ ಇವರು ಮತಗಳನ್ನು ಪಡೆಯಬೇಕು. ಕಳೆದ ಆರು ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ. ಜನತೆಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಕುಮಾರಸ್ವಾಮಿ ದೂರಿದರು.

ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ನಮ್ಮ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಬರಬೇಕಿರುವ ನಮ್ಮ ಪಾಲಿನಲ್ಲಿ ಸುಮಾರು 17 ಸಾವಿರ ಕೋಟಿ ರೂ. ಕಡಿತವಾಗಲಿದೆ. ಕೇಂದ್ರ ಸರಕಾರದ ಆದಾಯ ಸಂಗ್ರಹ 3-4 ಲಕ್ಷ ಕೋಟಿ ರೂ.ಕಡಿಮೆಯಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರಕ್ಕೆ ಈಗಲೂ ಸಲಹೆ ನೀಡುತ್ತೇನೆ, ನಿಮ್ಮ ಹಿಡೆನ್ ಅಜೆಂಡಾವನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನ ನೀಡಿ. ಕೇಂದ್ರ ಗೃಹ ಸಚಿವರು ತುಕಡೇ ತುಕಡೇ ಪಕ್ಷಗಳನ್ನೆಲ್ಲ ಮುಗಿಸಿಬಿಡುತ್ತೇವೆ ಎಂದಿದ್ದಾರೆ. ಒಂದು ಕಾಲದಲ್ಲಿ ಇವರದ್ದು ತುಕಡೇ ಪಕ್ಷವೇ ಆಗಿತ್ತು. ಹಿಂದೂ, ಹಿಂದೂ ರಾಷ್ಟ್ರ, ರಾಮನ ಹೆಸರು ಹೇಳಿಕೊಂಡು ವಾಜಪೇಯಿ, ಅಡ್ವಾಣಿ ಹಂತ ಹಂತವಾಗಿ ಪಕ್ಷ ಕಟ್ಟಿದ್ದಾರೆ. ಈಗ ಅಡ್ವಾಣಿಯನ್ನು ಮನೆಗೆ ಕಳುಹಿಸಿದ್ದಾರೆ ಎಂದು ಅವರು ದೂರಿದರು. 

ಆರೆಸೆಸ್ಸ್ ಹಾಗೂ ವಿಶ್ವ ಹಿಂದೂ ಪರಿಷತ್‌ಗೆ ನೇರವಾಗಿ ಹೇಳುತ್ತಿದ್ದೇನೆ. ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಯುವಕರು ಉದ್ಯೋಗ ಇಲ್ಲದೇ ಬೀದಿಗೆ ಬಂದಿದ್ದಾರೆ. ಬಡತನ ಹೆಚ್ಚಾಗುತ್ತಿದೆ. ಇದನ್ನು ಸರಿಪಡಿಸಲು ನಿಮ್ಮ ಬುದ್ಧಿ ಬಳಸಿ, ಯಾರೋ ವ್ಯಕ್ತಿಗಳನ್ನು ಹತ್ಯೆ ಮಾಡಲು ಬಳಕೆ ಮಾಡಬೇಡಿ ಎಂದು ಅವರು ಹೇಳಿದರು.

‘ಮಂಗಳೂರು ಘಟನೆ’ ವಿಧಾನಸಭೆಯಲ್ಲಿ ಚರ್ಚೆ

ಮಂಗಳೂರಿನಲ್ಲಿ ನಡೆದ ಘಟನೆಗಳು ಹಾಗೂ ಬಾಂಬ್ ಪ್ರಕರಣವನ್ನು ವಿಧಾನಸಭೆ ಕಲಾಪ ಆರಂಭವಾದಾಗ ಅಲ್ಲಿ ಚರ್ಚೆ ಮಾಡುತ್ತೇನೆ. ಆನಂತರ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸುವಂತಹ ಠರಾವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಿ. ಈ ವಿಚಾರದಲ್ಲಿ ನಾನು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ಮುಖ್ಯಮಂತ್ರಿ ಪಲಾಯನ ಮಾಡುತ್ತಿದ್ದಾರೆ.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News