ಮುಂದುವರಿದ ಸಂಪುಟ ವಿಸ್ತರಣೆ ಕಗ್ಗಂಟು: ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆಯ ಕಾರ್ಮೋಡ

Update: 2020-01-25 15:00 GMT

ಬೆಂಗಳೂರು, ಜ.25: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿದೇಶ ಪ್ರವಾಸದಿಂದ ಹಿಂದಿರುಗಿದ ಎರಡು, ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆಯ ಕಾರ್ಮೋಡ ಆವರಿಸಿಕೊಂಡಂತಾಗಿದೆ.

15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಡಿ.5ರಂದು ಪ್ರಕಟವಾದ ದಿನದಿಂದಲೂ ಸಂಪುಟ ಸೇರ್ಪಡೆಯ ಕನಸು ಕಾಣುತ್ತಿರುವ ನೂತನ ಶಾಸಕರು, ಇದೀಗ ಮತ್ತಷ್ಟು ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಖ್ಯಮಂತ್ರಿ ವಿದೇಶ ಪ್ರವಾಸದಿಂದ ಹಿಂದಿರುಗುತ್ತಲೇ ಸಚಿವ ಸ್ಥಾನದ ಆಕಾಂಕ್ಷಿಗಳು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ರವಿವಾರ ಹಾಗೂ ಸೋಮವಾರ ಮೈಸೂರು, ಮಡಿಕೇರಿ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿ, ಸಚಿವ ಸಂಪುಟ ವಿಸ್ತರಣೆ ಮಾಡುವ ಯಾವ ಸುಳಿವು ರಾಜ್ಯ ನಾಯಕರಿಗೆ ಕಾಣುತ್ತಿಲ್ಲ.

ಸೋಮವಾರದ ಬಳಿಕ ಮುಖ್ಯಮಂತ್ರಿ ಹೊಸದಿಲ್ಲಿಗೆ ತೆರಳಲಿದ್ದು, ಬಿಜೆಪಿಯ ನೂತನ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಅಭಿನಂದಿಸಿ, ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಗರದ ಡಾಲರ್ಸ್‌ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಉಪ ಚುನಾವಣೆಗೆ ಮುನ್ನ ಎಲ್ಲ ಅನರ್ಹ ಶಾಸಕರಿಗೂ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಆದರೆ, ಚುನಾವಣೆಯಲ್ಲಿ ಗೆದ್ದಿರುವವರಿಗೆ ಮಾತ್ರ ಸಚಿವ ಸ್ಥಾನ ನೀಡುವುದಾಗಿ ನಿನ್ನೆ ಮುಖ್ಯಮಂತ್ರಿ ನೀಡಿರುವ ಹೇಳಿಕೆಯಿಂದಾಗಿ, ಚುನಾವಣೆಯಲ್ಲಿ ಸೋತಿರುವ ಎಂಟಿಬಿ ನಾಗರಾಜ್ ಹಾಗೂ ಎಚ್.ವಿಶ್ವನಾಥ್‌ಗೆ ಸಚಿವರಾಗುವುದು ಮರೀಚಿಕೆಯಾದಂತಿದೆ.

ಆದುದರಿಂದ, ಪಕ್ಷ ಹಾಗೂ ಸರಕಾರದ ಹಿತದೃಷ್ಟಿಯಿಂದ ಎಷ್ಟು ಮಂದಿ ಮೂಲ ಹಾಗೂ ವಲಸಿಗ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಹಾಗೂ ಸಂತೋಷ್ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News