ಪರಿಸರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ತುಳಸಿ ಗೌಡರಿಗೆ 'ಪದ್ಮಶ್ರೀ'

Update: 2020-01-25 17:14 GMT

ಬೆಂಗಳೂರು, ಜ.25: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ಪರಿಸರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆ(ಪರಿಸರ) ಯಲ್ಲಿ ತೊಡಗಿರುವ ತುಳಸಿ ಗೌಡ ಅವರನ್ನು ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರ ಜೊತೆಗೆ ಅಕ್ಷರ ಸಂತ ಹರೇಕಳ ಹಾಜಬ್ಬ ಕೂಡಾ ರಾಜ್ಯದಿಂದ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

ತುಳಸಿ ಗೌಡ ಪರಿಚಯ:

ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ 82 ವರ್ಷದ ತುಳಸಿಗೌಡ, ನಿಜ ಅರ್ಥದ ವೃಕ್ಷಮಾತೆ. ಕಳೆದ 57 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡಿಕೊಂಡಿರುವ ತುಳಸಿಗೌಡ, ಲಕ್ಷಾಂತರ ಗಿಡಗಳನ್ನು ನೆಟ್ಟು ಬೋಳು ಬಿದ್ದ ಗುಡ್ಡಗಳಿಗೆ ಹಸಿರ ಹೊದಿಕೆ ಹೊದಿಸಿದ್ದಾರೆ. ಯಾವುದೇ ಲಾಭವಿಲ್ಲದೆ ಐದು ದಶಕಗಳ ಕಾಲ ಪರಿಸರದ ಪೋಷಣೆಗಾಗಿಯೇ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ.

ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಜನಿಸಿ, ಕಡು ಕಷ್ಟದಲ್ಲಿಯೇ ಬೆಳೆದ ಅವರು ಬಾಲ್ಯದಲ್ಲೇ ಅಪ್ಪನನ್ನು ಕಳೆದುಕೊಂಡರು. ನಂತರ ಮದುವೆಯಾದ ಬಳಿಕ ಗಂಡನನ್ನೂ ಕಳೆದುಕೊಂಡರು. ಕಾಡಿನ ಕಟ್ಟಿಗೆ ಮಾರಿ ಬದುಕು ಕಟ್ಟಿಕೊಂಡರು. ಈ ವೇಳೆ ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯಕ್ಕೆ ಸೇರಿಕೊಂಡರು.

ಬಾಲ್ಯದಿಂದಲೇ ಕಾಡು, ಮರ, ಗಿಡ, ಪ್ರಾಣಿ, ಪಕ್ಷಿಗಳೊಂದಿಗೆ ಬೆಳೆದ ತುಳಸಿ ಗೌಡ, ಅರಣ್ಯದ ವಿಶ್ವಕೋಶ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಯಾವ ಯಾವ ಸಸಿಯನ್ನು ಯಾವ ಸಮಯದಲ್ಲಿ ನೆಡಬೇಕು. ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ ಈ ಎಲ್ಲ ಮಾಹಿತಿಗಳು ಇವರ ಜ್ಞಾನ ಭಂಡಾರದಲ್ಲಿದೆ.

ಮನೆಯಲ್ಲಿ ಬಡತನ, ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದರೂ ಕಳೆದ 60 ವರ್ಷಗಳಿಂದ ಪರಿಸರ ಪ್ರೇಮ ತೋರಿಸುತ್ತಿದ್ದು, ಇಲ್ಲಿಯವರೆಗೆ ಲಕ್ಷಾಂತರ ಸಸಿಗಳನ್ನು ನೆಟ್ಟಿರುವ, ನೀರು ಎರೆದು ಮರಗಳನ್ನಾಗಿ ಬೆಳೆಸಿರುವ, ನಾಡಿನ ಸಂಪತ್ತನ್ನಾಗಿ ಮಾಡಿರುವ ತುಳಸಿ ತಾಯಿಯನ್ನು ಸ್ಥಳೀಯರು ಮರಗಳ ವಿಜ್ಞಾನಿ ಎಂದೇ ಕರೆಯುತ್ತಾರೆ.

ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನ ಮರಗಳ್ಳರು ಕಡಿದಾಗ ಕಡಿದ ಮರವನ್ನ ಅಪ್ಪಿ ತುಳಸಿ ಅವರು ಅತ್ತ ಘಟನೆಗಳು ಸಾಕಷ್ಟಿವೆ. ವಯಸ್ಸಾದರೂ ಈಗಲೂ ಲಕ್ಷಾಂತರ ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಪ್ರೀತಿಯನ್ನು ತೋರುತ್ತಿದ್ದಾರೆ.

ಕಾಡಿನಿಂದ ತಂದ ಬೀಜಗಳನ್ನು ಸಸಿ ಮಾಡಿ ಶಾಲೆ ಆವರಣ, ರಸ್ತೆ, ಗುಡ್ಡ ಬೆಟ್ಟದಲ್ಲಿ ನೆಟ್ಟು ಪೋಷಿಸತೊಡಗಿದರು. ಒಂದೇ ವರ್ಷದಲ್ಲಿ 30 ಸಾವಿರ ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆಯಿಂದ ಹಣ ನೀಡದಿದ್ದರೂ, ಅವುಗಳ ರಕ್ಷಣೆಯನ್ನು ಮಾಡಿದ ಕೀರ್ತಿ ಇವರದು. 300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಮಾಹಿತಿ ಇರುವ ಇವರು 'ಸಸ್ಯ ವಿಜ್ಞಾನಿ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಇವರ ಶ್ರಮ ಹಾಗೂ ಉತ್ಸಾಹವನ್ನು ಪರಿಗಣಿಸಿ ಅಂದಿನ ಅರಣ್ಯಾಧಿಕಾರಿ ಅ.ನ.ಯಲ್ಲಪ್ಪ ರೆಡ್ಡಿಯವರು ಮಾಸ್ತಿಕಟ್ಟೆ ಅರಣ್ಯ ವಲಯವನ್ನು ಪೋಷಿಸುವ ಕೆಲಸ ಕೊಡಿಸಿದ್ದರು. ಹೀಗೆ ಇವರ ಜೀವಮಾನದಲ್ಲಿ ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದಾರೆ. ಇವರ ಸಾಧನೆಗೆ ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದು ಗೌರವಿಸಿವೆ.

ಪರಿಸರ ಸಂರಕ್ಷಣೆಯಂತಹ ಮಹಾತ್ಕಾರ್ಯಕ್ಕೆ ನಿಂತು, ಜೀವಸಂಕುಲಗಳ ಉಳಿವಿಗೆ ಕಾರಣರಾಗಿರುವ ತುಳಸಿ ಗೌಡ ಈ ನಾಡಿನ ಹೆಮ್ಮೆ. ಅವರ ಪರಿಸರ ಕಾಳಜಿ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News