ಕೊಲೆ ಬೆದರಿಕೆಯಿಂದ ಮತ್ತಷ್ಟು ಉತ್ಸುಕ: ಪ್ರೊ.ಮಹೇಶ್ ಚಂದ್ರಗುರು

Update: 2020-01-25 17:32 GMT

ಮೈಸೂರು,ಜ.25: ದೇಶದ ಸರ್ವಜನಾಂಗಗಳ ಅಭ್ಯುದಯಕ್ಕೆ ಬದ್ಧರಾಗಿರುವ ಪ್ರಗತಿಪರರನ್ನು ಪ್ರೋತ್ಸಾಹಿಸುವ ಬದಲಿಗೆ ಕೊಲ್ಲುವ ಮಾತುಗಳನ್ನಾಡುವುದು ಯಾವುದೇ ರೀತಿಯಲ್ಲೂ ಸೂಕ್ತವಲ್ಲ. ಇಂತಹ ಕೊಲೆ ಬೆದರಿಕೆಗಳು ಸುಧಾರಣಾವಾಧಿಗಳ ವಿರುದ್ಧ ಅನಾದಿಕಾಲದಿಂದಲೂ ಬರುತ್ತಲೇ ಇವೆ. ಬೊಗಳುವ ನಾಯಿ ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ, ನಾವು ಈ ದೇಶದ ಕಾವಲು ನಾಯಿಗಳಂತೆ ಪ್ರೀತಿಯಿಂದ ಇನ್ನೂ ಹೆಚ್ಚು ಕಾರ್ಯನಿರ್ವಹಿಸಲು ಸದಾ ಬದ್ಧರಾಗಿದ್ದೇವೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಅಭಿಪ್ರಾಯಿಸಿದರು.

ಅನಾಮದೇಯ ಕೊಲೆ ಬೆದರಿಕೆ ಪತ್ರ ಬಂದಿರುವ ಹಿನ್ನಲೆಯಲ್ಲಿ ಶನಿವಾರ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಅವರು, ಬೊಗಳುವ ನಾಯಿ ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ, ಇಂತಹ ಕೊಲೆ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇಂತಹ ಬೆದರಿಕೆಗಳಿಗೆ ಬಗ್ಗದೆ ಮತ್ತಷ್ಟು ಹೆಚ್ಚಿನ ಪ್ರೀತಿ ಜವಾಬ್ದಾರಿ ಮತ್ತು ಕಾಳಜಿಯಿಂದ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಸಿದ್ದರಿದ್ದೇವೆ. ವಿವೇಕಾನಂದರು ಹೇಳಿದಂತೆ ಜೀವಂತ ಶವಗಳಾಗಿ ಬದುಕುವುದಕ್ಕಿಂತ ಮಾನವೀಯ ಮೌಲ್ಯಗಳಿಗೆ ಪ್ರಾಣವನ್ನು ತ್ಯಾಗ ಮಾಡಿ ಹುತಾತ್ಮರಾಗಿ ಸತ್ತ ಮೇಲೆಯೂ ಬದುಕಬೇಕೆಂಬ ಹಂಬಲ ನಮ್ಮದಾಗಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಜ್ಜನರು ಸುಸಂಸ್ಕೃತರು ಅಭಿಪ್ರಾಯ ಭೆದಗಳನ್ನು ಗೌರವಿಸಬೇಕು. ಯಾವುದೇ ಒಂದು ವಿಷಯ ಮತ್ತು ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಪರ ಅಥವಾ ವಿರೋಧ ಅಭಿಪ್ರಾಯಗಳು ಬರುವುದು ಸಹಜ. ಪ್ರಗತಿಪರರು ಸಂವಿಧಾನಕ್ಕೆ ನಿಷ್ಠರಾಗಿ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ತಮಗೆ ಲಭಿಸಿರುವಂತಹ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಸಂದರ್ಭೋಚಿತವಾಗಿ ತಮ್ಮ ಅನಿಸಿಕೆಗಳು ಮತ್ತು ಅಭಿಪ್ರಾಯಗಳನ್ನು ಮಂಡಿಸುವ ಮೂಲಭೂತ ಸ್ವಾತಂತ್ರಯವನ್ನು ಹೊಂದಿದ್ದಾರೆ ಎಂದು ಹೇಳಿದರು.

ಹಿಂದೂ ಧರ್ಮವು ಅಸಮಾನತೆಯ ತವರೂರಾಗಿದ್ದು, ಈ ನೆಲದ ಮೂಲ ನಿವಾಸಿಗಳು ಮತ್ತು ಹಿಂದುಳಿದ ಸಮುದಾಯಗಳಿಗೆ ಸಮಾನ ಪ್ರೀತಿ ಗೌರವ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡಲು ಪೂರಕವಾಗಿಲ್ಲ. ಪ್ರಕೃತಿ ಧರ್ಮಕ್ಕಿಂತ ಮತ್ತು ಸಂವಿಧಾನ ಧರ್ಮಕ್ಕಿಂತ ಹಿಂದೂ ಧರ್ಮವನ್ನು ಒಳಗೊಂಡಂತೆ ಯಾವುದೇ ಧರ್ಮ ಶ್ರೇಷ್ಠವಲ್ಲ, ಅನೇಕ ಮಹನೀಯರು ವಿವಿಧ ಕಾಲಘಟ್ಟಗಳಲ್ಲಿ ಸಮಾಜದ ಶುದ್ಧೀಕರಣ ಮತ್ತು ಧಾರ್ಮಿಕ ಸುಧಾರಣೆಗಾಗಿ ಅಹಿಂಸಾತ್ಮಕ ಹೋರಾಟಗಳನ್ನು ನಡೆಸಿದ್ದಾರೆ. ಅವರನ್ನು ಯಾರೂ ದೇಶದ್ರೋಹಿಗಳೆಂದು ಬಣ್ಣಿಸಲಿಲ್ಲ ಮತ್ತು ಅವರಿಗೆ ಯಾವುದೇ ರೀತಿಯ ಕೊಲೆ ಬೆದರಿಕೆಗಳನ್ನು ಹಾಕಲಿಲ್ಲ. ಇಂದು ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ ಅಸಹಿಷ್ಣುತೆ ನಿರಂತರವಾಗಿ ಹೆಚ್ಚುತ್ತಿದೆ. ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಪ್ರಜಾಸತ್ತಾತ್ಮಕ ಆಶಯಗಳಿಗೆ ಬದ್ಧರಾಗಿರುವ ಪ್ರಗತಿಪರರು ಮತ್ತು ವಿಚಾರವಾದಿಗಳು ಹಿಂದೂ ಧರ್ಮ ಸುಧಾರಣೆಯಾಗಬೆಕು ಮತ್ತು ಭಾರತ ದೇಶ ಪ್ರಭುದ್ಧ ಭಾರತವಾಗಿ ರೂಪುಗೊಳ್ಳಬೇಕು ಎಂಬ ಕಾಳಜಿಯನ್ನು ಹೊಂದಿದ್ದಾರೆ ಎಂದು ಹೇಳಿದರು.

ಇಂದಿನ ಮನುವಾದಿಗಳು ಸಮಾನತೆ, ವೈಚಾರಿಕತೆ, ವೈಜ್ಞಾನಿಕತೆ ಮತ್ತು ಮಾನವೀಯತೆಗಳಿಗೆ ಅಪಚಾರ ಉಂಟಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ದೇಶದ ಘನತೆಯನ್ನು ಕುಗ್ಗಿಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News