ಬಿಜೆಪಿ ವಿರುದ್ಧ ಎಚ್‌ಡಿಕೆ ಆರೋಪ ಸರಿಯಲ್ಲ: ಡಿಸಿಎಂ ಅಶ್ವಥ್ ನಾರಾಯಣ

Update: 2020-01-25 17:47 GMT

ಬೆಂಗಳೂರು, ಜ.25: ಬಿಜೆಪಿ ಕಡೆಯಿಂದ ತಮಗೆ ಜೀವ ಬೆದರಿಕೆ ಬಂದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂತಹ ಬೆದರಿಕೆ ಬಂದಿದ್ದರೆ ಅವರು ಪೊಲೀಸ್ ಇಲಾಖೆಗೆ ತಿಳಿಸಬಹುದಿತ್ತು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದರು.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಡೆಯ ಯಾವ ವ್ಯಕ್ತಿ ಮತ್ತು ಯಾವ ರೀತಿ ಬೆದರಿಕೆ ಬಂದಿದೆ ಎಂದು ಕುಮಾರಸ್ವಾಮಿ ಹೇಳಿಲ್ಲ. ಬಿಜೆಪಿಯನ್ನು ಗುರಿಯಾಗಿಸಿಕೊಂಡು ಈ ರೀತಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.

ಬಿಜೆಪಿ ಎಂದಿಗೂ ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಇತರ ಕೆಲ ಪಕ್ಷಗಳು ಇಂತಹ ಕೆಲಸವನ್ನು ಮಾಡುತ್ತವೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಹ ಕುಮಾರಸ್ವಾಮಿ ರೀತಿ ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಅವರು ಹೇಳಿದರು.

ಡಿ.ಕೆ.ಶಿವಕುಮಾರ್ ಅವರಂತಹ ಹಿರಿಯ ಮತ್ತು ಅನುಭವಿ ರಾಜಕೀಯ ವ್ಯಕ್ತಿಗಳು ಸಮಾಜ ಕಟ್ಟುವುದನ್ನು ಬಿಟ್ಟು, ಜಾತಿಯ ಮೇಲೆ ಜಾತಿಯನ್ನು ಎತ್ತಿಕಟ್ಟಿ, ಜಾತಿಗಳ ಮಧ್ಯೆ ವೈಮನಸ್ಯ ಮೂಡಿಸಲು ಹೊರಟಿರುವುದು ನಿಜಕ್ಕೂ ದುರಂತ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಪ್ರೇರಿತ ಮತ್ತು ದಿಕ್ಕು ತಪ್ಪಿಸುವ ಹೇಳಿಕೆಯನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಮಾಧಿಕಾರ. ಈ ಬಗ್ಗೆ ಅವರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News