'ಬಿಎಸ್‌ವೈ ನೇರವಾಗಿ ಹೇಳಿದ್ದರೂ ಕೇಳಲಿಲ್ಲ': ಸೋತವರಿಗೆ ಸಚಿವ ಸ್ಥಾನದ ಬಗ್ಗೆ ಎಸ್.ಟಿ.ಸೋಮಶೇಖರ್

Update: 2020-01-25 17:58 GMT

ಮೈಸೂರು,ಜ.25: ಮುಖ್ಯಮಂತ್ರಿ ಯಡಿಯೂರಪ್ಪ ಸೋತವರನ್ನು ಮಂತ್ರಿ ಮಾಡಲು ಸಾಧ್ಯವಿಲ್ಲ ಎಂದು ಹಿಂದೆಯೇ ಹೇಳಿದ್ದು, ಅದರಂತೆ ಮಾಡಲಿದ್ದಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಸಂದರ್ಭ ಶನಿವಾರ ಸೋತವರಿಗೆ ಮಂತ್ರಿ ಭಾಗ್ಯ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಕೆಲವರಿಗೆ ಬಿ ಫಾರಂ ಕೊಡುವಾಗಲೇ ಹೇಳಿದ್ದರೂ ಚುನಾವಣೆಗೆ ನಿಲ್ಲಬೇಡಿ. ನಿಮಗೆ ಚುನಾವಣೆ ಎದುರಿಸುವುದು ಕಷ್ಟವಾಗುತ್ತದೆ. ಮೇ ತಿಂಗಳಲ್ಲಿ ನಿಮ್ಮನ್ನು ಎಂಎಲ್‍ಸಿ ಮಾಡಿ ಮಂತ್ರಿ ಮಾಡುವುದಾಗಿ ಶಂಕರ್ ಸೇರಿದಂತೆ ಉಳಿದವರಿಗೂ ಹೆಳಿದ್ದರು. ಆದರೆ ಕೆಲವರು ಅಂದು ಮುಖ್ಯಮಂತ್ರಿಗಳು ನೇರವಾಗಿ ಹೇಳಿದರೂ ಕೇಳಲಿಲ್ಲ. ಬಿ ಫಾರಂ ತೆಗೆದುಕೊಳ್ಳಿ, ಸೋತರೆ ಮಂತ್ರಿ ಮಾಡಲು ಆಗುವುದಿಲ್ಲ ಎಂದು ಅಂದೇ ಹೇಳಿದ್ದರು ಎಂದರು.

ಅವತ್ತು ಏನು ಹೇಳಿದ್ದಾರೆ ಅದನ್ನು ಆಚರಣೆಗೆ ತರುತ್ತಾರೆ. ಆರ್.ಶಂಕರ್ ಗೆ ಹೇಳಿದಾಗ ಅವರು ಒಪ್ಪಿಕೊಂಡಿದ್ದಾರೆ. ಅದರಂತೆ ಅವರನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುತ್ತಾರೆ. ಉಳಿದ 11 ಮಂದಿಗೂ ಸ್ಥಾನ ಕೊಡಬೇಕೆಂದು ಕೇಳುತ್ತಿದ್ದೇವೆ. ಉಳಿದವರನ್ನು ಈಗಲೇ ಮಾಡಲು ಆಗುವುದಿಲ್ಲ. ಎಂಎಲ್ಸಿ ಅಥವಾ ಬೇರೆ ಏನಾದರೂ ಮಾಡಿ ಕೊಡಬೇಕಾಗುತ್ತದೆ. ಆದ್ದರಿಂದ ಉಳಿದವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಯಡಿಯೂರಪ್ಪನವರು ತೀರ್ಮಾನ ಮಾಡುತ್ತಾರೆ ಎಂದರು.

ವಿಶ್ವನಾಥ್ ಅವರಿಗೆ 'ನಿಮ್ಮ ಕ್ಷೇತ್ರದಲ್ಲಿ ಸ್ವಲ್ಪ ಕಷ್ಟವಾಗಲಿದೆ. ನಿಮ್ಮನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುತ್ತೇವೆಂದು' ಮುಖ್ಯಮಂತ್ರಿಗಳು ನಮ್ಮೆಲ್ಲರ ಸಮ್ಮುಖದಲ್ಲಿ ಹೇಳಿದ್ದು ನಿಜ. ಅವರು 'ಇಲ್ಲ ನಾನು ಸ್ಪರ್ಧಿಸುತ್ತೇನೆ. ನನ್ನ ಕ್ಷೇತ್ರ ನಾನು ಯಾರಿಗೂ ಬಿಟ್ಟುಕೊಡುವುದಿಲ್ಲ' ಎಂದಿದ್ದರು. ಮುಖ್ಯಮಂತ್ರಿಗಳು 'ನಿಮ್ಮಿಷ್ಟ ನೀವು ಗೆಲ್ಲುತ್ತೇನೆ ಎಂದಿದ್ದರೆ ನಿಂತುಕೊಳ್ಳಿ, ನನ್ನ ಅಭ್ಯಂತರ ಇಲ್ಲ. ಆದರೆ, ವರದಿ ನೋಡಿದರೆ ಬೇರೆ, ಬೇರೆ ಕಾರಣಗಳಿಂದ ನಿಮಗೆ ಹಿನ್ನಡೆ ಆಗಲಿದೆ ಎಂಬ ಮಾಹಿತಿಯಿದೆ. ಗೆದ್ದೇ ಗೆಲ್ಲುತ್ತೇವೆಂಬ ಮಾಹಿತಿ ಇದ್ದರೆ ನೀವು ನಿಂತುಕೊಳ್ಳಿ' ಎಂದು ಬಿ ಫಾರಂ ಕೊಟ್ಟಿದ್ದರು ಎಂದು ಹೇಳಿದರು. ಮೂರು ದಿನದಲ್ಲಿ ಮಂತ್ರಿ ಮಂಡಲದಲ್ಲಿ ವಿಸ್ತರಿಸುವುದಾಗಿ ಹೇಳಿದ್ದಾರೆ. ಆ ವಿಷಯದಲ್ಲಿ ಏನೂ ಒತ್ತಡ ಹೇರಲು ಆಗುವುದಿಲ್ಲವಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News