ಬಿಜೆಪಿ ಸರಕಾರದ ಅವಧಿಯಲ್ಲಿ ಕೆಲಸ ಆಗುತ್ತಿಲ್ಲ ಎನ್ನುವುದು ಪೂರ್ವಗ್ರಹ ಪೀಡಿತ ಹೇಳಿಕೆ: ಸಿ.ಟಿ.ರವಿ

Update: 2020-01-26 15:33 GMT

ಚಿಕ್ಕಮಗಳೂರು, ಜ.26: ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಸಿಎಂ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನಿಸುವ ಸಂಗತಿಯಾಗಿದೆ. ಈ ಪ್ರಕ್ರಿಯೆ ತಡವಾಗುತ್ತಿದ್ದರೂ ರಾಜ್ಯ ಸರಕಾರ ಅಭಿವೃದ್ಧಿ ವಿಚಾರದಲ್ಲಿ ದಾಪುಗಾಲಿಡುತ್ತಿದೆ. ಕೆಲಸ ಆಗುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷದವರು ಹೇಳುವುದು ಪೂರ್ವಗ್ರಹಪೀಡಿತವಾದ ಹೇಳಿಕೆಯಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಐದು ವರ್ಷಗಳಲ್ಲಿ ಜಿಲ್ಲೆಗೆ ನೀಡಿದ ಕೊಡುಗೆಗಳು ಹಾಗೂ ಈಗಿನ ಬಿಜೆಪಿ ಸರಕಾರದ ಐದು ತಿಂಗಳ ಅವಧಿಯಲ್ಲಿ ನೀಡಿರುವ ಕೊಡುಗೆಗಳ ಬಗ್ಗೆ ಅಂಕಿ ಅಂಶಗಳನ್ನು ನೀಡಲು ಸಿದ್ಧವಿದ್ದು, ಅವರು ಎಲ್ಲಿ ಬೇಕಾದರೂ ಚರ್ಚೆಗೆ ಬರಲಿ ಎಂದು ಸಚಿವ ಸಿ.ಟಿ.ರವಿ ಸವಾಲು ಹಾಕಿದ್ದಾರೆ.

ರವಿವಾರ ನಗರದ ಪ್ರವಾಸಿಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಮೈಸೂರಿಗೆ ನೀಡಿದ ಕೊಡುಗೆ ಬಗ್ಗೆ ಚರ್ಚೆಗೆ ಬಂದಲ್ಲಿ ಅದಕ್ಕೂ ಸಿದ್ಧ, ಚಿಕ್ಕಮಗಳೂರಿನ ಚರ್ಚೆಗೂ ಸಿದ್ಧ, ಅವರ ಅವಧಿಯಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಅನುದಾನ ಕೇಳಿದಾಗ ಅವರು ಮೊಳಕೈಗೆ ತುಪ್ಪ ಸವರುವ ಕೆಲಸವನ್ನೂ ಮಾಡಲಿಲ್ಲ. ಮೆಡಿಕಲ್ ಕಾಲೇಜನ್ನೂ ಕೊಡಲಿಲ್ಲ ಎಂದ ಅವರು, ನಮ್ಮ ಸರಕಾರ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದೆ. ಅನುದಾನವವೂ ಬಿಡುಗಡೆ ಮಾಡಿದೆ. ಕಟ್ಟಡ ಮಂಜೂರಾತಿಯೂ ಆಗಿದೆ. ಜಿಲ್ಲಾ ಉತ್ಸವದ ಸಂದರ್ಭಲ್ಲಿ ಸಿಎಂ ಅವರಿಂದಲೇ ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಿಸುತ್ತೇವೆ. ಸರಕಾರದ ಅವಧಿಯಲ್ಲಿ ಕೆಲಸ ಆಗುತ್ತಿಲ್ಲ ಎನ್ನುವುದನ್ನು ತಾನು ಒಪ್ಪೊದಿಲ್ಲ. ಖಾತೆ ಹಂಚಿಕೆ ವಿಚಾರ ತಡವಾಗಲು ಬೇರೆ ಬೇರೆ ಕಾರಣವಿದ್ದು, ಅದನ್ನಿಲ್ಲಿ ಹೇಳಲು ಸಾಧ್ಯವಿಲ್ಲ ಎಂದರು.

ಖಾತೆ ಬದಲಾವಣೆ ಸಂದರ್ಭ ಹಾಲಿ ಸಚಿವರ ಖಾತೆ ಬದಲಾದಲ್ಲಿ ಯಾವ ಸಮಸ್ಯೆಯೂ ಆಗಲ್ಲ. ರಾಜಕಾರಣಲ್ಲಿ ಅಧಿಕಾರ ಸ್ಥಿರ ಅಲ್ಲ, ಆದ್ದರಿಂದ ಇದನ್ನೇ ನೆಚ್ಚಿಕೊಂಡು ಕುಳಿತಿಲ್ಲ. ಇರುವ ತನಕ ಒಳ್ಳೆ ಕೆಲಸ ಮಾಡಬೇಕಷ್ಟೆ, ಖಾತೆ ಬದಲಾವಣೆಯಾದಲ್ಲಿ ಬರುವ ಸಚಿವರು ಚಾಲ್ತಿಯಲ್ಲಿರುವ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆಂಬ ನಂಬಿಕೆ ಇದೆ ಎಂದರು.

ಮಾಜಿ ಸಿಎಂ ಸೇರಿದಂತೆ ಕೆಲ ಸಾಹಿತಿಗಳು, ಬುದ್ಧಿಜೀವಿಗಳಿಗೆ ಪ್ರಾಣಬೆದರಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೊಲೆ ಬೆದರಿಕೆ ಯಾರಿಂದ ಬಂದಿದೆ ಎಂದು ಹೇಳಿ ದೂರು ನೀಡಿದರೆ ಸರಕಾರ ಕ್ರಮಕೈಗೊಳ್ಳುತ್ತದೆ. ಆದರೆ ಕೆಲ ಸಂದರ್ಭಗಳಲ್ಲಿ ಕಳೆದು ಹೋಗುವ ಭೀತಿಯಿಂದಾಗಿ ಕೇವಲ ತಾವು ಚಾಲ್ತಿಯಲ್ಲಿರಬೇಕೆಂಬ ಉದ್ದೇಶದಿಂದ ಇಂತಹ ಹೇಳಿಕೆ ನೀಡುತ್ತಾರೆ. ಕೊಲೆ ಬೆದರಿಕೆ ನಿರಾಧಾರವಾಗಿದೆ. ಇಂತಹ ಸಂದರ್ಭಗಳಲ್ಲಿ ಸಂಘಪರಿವಾರದ ಮೇಲೆ ಆರೋಪ ಹೊರಿಸುವುದು ಪ್ಯಾಶನ್ ಆಗಿದೆ. ಕೊಲೆ ಬೆದರಿಕೆ ಮಾಜಿ ಮುಖ್ಯಮಂತ್ರಿಗೆ ಬಂದಿದೆ ಎಂದಾದರೆ ನಿರ್ದಿಷ್ಟವಾಗಿ ಹೇಳಿಕೆ ನೀಡಿ ದೂರು ನೀಡಬೇಕು. ಸಾಮಾನ್ಯ ಜನರ ಸೇರಿದಂತೆ ಮಾಜಿ ಮುಖ್ಯಮಂತ್ರಿಯ ಪ್ರಾಣ ರಕ್ಷಣೆ ಸರಕಾರದ ಜವಬ್ದಾರಿಯಾಗಿದೆ. ಇಲ್ಲಿ ಬೆದರಿಕೆಗಳಿಗೆ ಅವಕಾಶವಿಲ್ಲ, ನಾವು ಯಾರನ್ನೂ ಬೆದರಿಸುವುದೂ ಇಲ್ಲ, ಬೆದರುವುದೂ ಇಲ್ಲ ಎಂದರು.

ರಾಜ್ಯದಲ್ಲಿ ತೆರಿಗೆ ಸಂಗ್ರಹಕ್ಕೆ ಹಿನ್ನಡೆಯಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಹೆಚ್ಚು ಅಧಿಕೃತ ಮಾಹಿತಿ ಇಲ್ಲ. ರಾಜ್ಯದಲ್ಲಿ ಅತಿವೃಷ್ಟಿಯಂತಹ ಘಟನೆಗಳಿಂದಾಗಿ ತೆರಿಗೆ ಸಂಗ್ರಹಕ್ಕೆ ಕೊಂಚ ಹಿನ್ನಡೆಯಾಗಿರಬಹುದು. ಜಾಗತಿಕವಾಗಿಯೂ ಆರ್ಥಿಕ ಹಿಂಜರಿತ ಇದ್ದು, ಇದರ ಪರಿಣಾಮ ದೇಶ, ರಾಜ್ಯಗಳ ಮೇಲೂ ಆಗಿದೆ. ಆದರೆ ಇದು ತಾತ್ಕಲಿಕ, ಶಾಶ್ವತವಲ್ಲ ಎಂಬುದನ್ನು ಜಾಗತಿಕ ಅರ್ಥ ಶಾಸ್ತ್ರಜ್ಞರೇ ಹೇಳಿಕೆ ನೀಡಿದ್ದಾರೆ ಎಂದು ಸಿ.ಟಿ.ರವಿ ಹೇಳಿದವರು.

ನಗರದಲ್ಲಿ ನಿರ್ಮಾಣಹಂತದಲ್ಲಿದ್ದ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಕಾಮಗಾರಿ ಜಮೀನಿನ ವಿವಾದದಿಂದಾಗಿ ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣವಾಗಿರುವುದು ನಾನಲ್ಲ. ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಅವರು ಅಧಿಕಾರಿಗಳ ಒತ್ತಡದಿಂದಾಗಿ ಆ ಜಾಗದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದು, ಕಾಮಗಾರಿ ಆರಂಭಿಸಿದ್ದರು. ಕಾಮಗಾರಿ ನಡೆಯುತ್ತಿರುವ ಜಾಗ ಖಾಸಗಿ ಅವರಿಗೆ ಸೇರಿದ್ದು, ಅವರು ಆರಂಭದಲ್ಲೇ ಗಮನಕ್ಕೆ ತಂದಿದ್ದರೇ ಈ ವಿವಾದ ಆಗುತ್ತಿರಲಿಲ್ಲ. ಕಾಮಗಾರಿ ಆರಂಭವಾಗಿ ಹಣ ಬಿಡುಗಡೆಯಾದ ಬಳಿಕ ನ್ಯಾಯಾಲಯದ ಮೊರೆ ಹೋಗಿರುವುದರಿಂದ ಕಾಮಗಾರಿಗೆ ತಡೆ ಬಿದ್ದಿದೆ. ಈ ಸಂಬಂಧ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ಎಂದರು.

ಮೆಡಿಕಲ್ ಕಾಲೇಜಿಗೆ ಗುರುತಿಸಲಾದ ಜಮೀನು ಕೂಡ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆ ಜಾಗ ನಮ್ಮದು ಎನ್ನುತ್ತಿದ್ದಾರೆ. ಈ ಕಾರಣಕ್ಕೆ ಸರಕಾರವು ಸರಕಾರಿ ಉದ್ದೇಶಗಳಿಗೆ ಬೇಕಾಗಿರುವ ಜಾಗಗಳನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಹೊರ ತರಲು ಸುಪ್ರೀಂ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಇದರ ತೀರ್ಪು ಇನ್ನೂ ಬಂದಿಲ್ಲ. ಈ ಮಧ್ಯೆ ಅರಣ್ಯ ಇಲಾಖೆ ಜಾಗ ನಮ್ಮದು ಎನ್ನುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಸರಕಾರ ಪ್ರಯತ್ನ ಮಾಡಿದೆ. ಸ್ವಲ್ಪ ಸಮಯ ಆಗುತ್ತದೆಯೇ ಹೊರತು, ಸಮಸ್ಯೆ ಆಗಲ್ಲ. ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕಷ್ಟೆ ಎಂದರು.

ಈ ವೇಳೆ ವಿಪ ಸದಸ್ಯ ಪ್ರಾಣೇಶ್, ಡಿಸಿ ಡಾ.ಬಗಾದಿ ಗೌತಮ್, ಎಸ್ಪಿ ಹರೀಶ್ ಪಾಂಡೆ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಸದಸ್ಯೆ ಜಸಿಂತಾ ಅನಿಲ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸಾಹಿತ್ಯ ಪರಿಷತ್ ಸ್ವಾಯತ್ತಾ ಸಂಸ್ಥೆಯಾಗಿದ್ದರೂ ಸರಕಾರಕ್ಕಿಂತ ದೊಡ್ಡದೇನಲ್ಲ. ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇಳೆ ಜಿಲ್ಲಾ ಕಸಾಪ ಕಾರ್ಯಾಕಾರಿ ಮಂಡಳಿ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾದಾಗ ಕಾನೂನು ಪಾಲನೆ ಮಾಡಬೇಕಿತ್ತು. ಅದನ್ನು ಪಾಲನೆ ಮಾಡಿಲ್ಲ. ವಿವಾದ ಬೆಳೆಸುವ ಉದ್ದೇಶದಿಂದಲೇ ಕಾನೂನು ಮೀರಿ ಸಮ್ಮೇಳನ ಮಾಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.

  - ಸಿ.ಟಿ.ರವಿ

ಮಂಗಳೂರು ಬಾಂಬ್ ಪ್ರಕರಣ ತನಿಖೆಯಲ್ಲಿದೆ. ಆತ ಯಾರೇ ಆಗಿದ್ದು, ಯಾವುದೇ ಸಂಘಟನೆ ಸೇರಿದ್ದರೂ ಶಿಕ್ಷೆಯಾಗಲೇ ಬೇಕು. ಭಯೋತ್ಪಾದಕರು ತಮ್ಮವರು ಎಂದು ಹೇಳಿಕೊಳ್ಳುವ ಹೀನ ಸಂಸ್ಕøತಿ ನನ್ನದಲ್ಲ. ಆತ ಯಾರೇ ಆಗಿದ್ದರೂ ಶಿಕ್ಷೆಯಾಗಲಿದೆ. ಆತನನ್ನು ಜಾತಿ, ಧರ್ಮಾದ ಆಧಾರದ ಮೇಲೆ ಅಳೆಯುವುದಿಲ್ಲ. ಭಯೋತ್ಪಾದನೆ ಹುಟ್ಟುಹಾಕುವುದು, ಭಯ ನಿರ್ಮಾಣ ಮಾಡುವುದಕ್ಕೆ ಅವಕಾಶ ನೀಡಲ್ಲ. ಧಾರ್ಮಿಕ ಭಯೋತ್ಪಾದನೆಯನ್ನು ನಮ್ಮ ದೇಶ ಒಪ್ಪಿಕೊಂಡಿಲ್ಲ. ಅದಕ್ಕೆ ಆಸ್ಪದವೂ ಇಲ್ಲ. ಈ ದೇಶ ಸಿರಿಯಾ ಅಲ್ಲ, ಇರಾಕೂ ಅಲ್ಲ, ಭಯೋತ್ಪಾದಕರೆಲ್ಲ ನಮ್ಮವರೆಂದು ಹೇಳಲೂ ಇದು ಪಾಕಿಸ್ತಾನವೂ ಅಲ್ಲ.

 - ಸಿ.ಟಿ.ರವಿ

ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಪಾಳು ಬಿದ್ದಿದೆ ಎಂಬ ವಿರೋಧ ಪಕ್ಷಗಳ ಟೀಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಸ್ತುವಾರಿ ಸಚಿವರ ಕಚೇರಿ ಮೂಲಕವೇ ಸಾರ್ವಜನಿಕರ ಕೆಲಸ ಆಗಬೇಕೆಂಬುದು ಸರಿಯಾದರೂ ತಾನು ಮಂತ್ರಿಯಾಗಿ ಜನರು ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವುದು ಸರಿಯಲ್ಲ. ಸಚಿವರ ಕಚೇರಿ ಹಿಂದಿನಿಂದಲೂ ಇದೆ. ಹಿಂದಿನ ಸರಕಾರಗಳ ಅವಧಿಯಲ್ಲಿ ಎಷ್ಟು ಮಂದಿ ಉಸ್ತುವಾರಿ ಸಚಿವರು ಆ ಕಚೇರಿ ಮೂಲಕವೇ ಜನರಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ?, ನಾನು ಜಡ ಅಲ್ಲ, ಚಲನಶೀಲ, ನಗರದಲ್ಲಿ ನನ್ನದು ಗೃಹ ಕಚೇರಿ ಇದೆ. ಸರಕಾರಕ್ಕೆ ಹೊರೆಯಾಗಬಾರದೆಂದು 13 ವರ್ಷಗಳಿಂದ ಶಾಸಕರ ಕಾರ್ಯಾಲಯವನ್ನೂ ಹೊಂದಿಲ್ಲ. ಬೇರೆ ಜಿಲ್ಲೆ, ರಾಜ್ಯಗಳಲ್ಲಿ ಐಬಿಯನ್ನೇ ಕಚೇರಿ ಮಾಡಿಕೊಂಡಿದ್ದಾರೆ. ನಾನು ಗೃಹ ಕಚೇರಿ ಮೂಲಕ ಜನರಿಗೆ ಸ್ಪಂದಿಸುತ್ತಿದ್ದೇನೆ. ಗೃಹ ಕಚೇರಿ ಸರ್ವರಿಗೂ ಮುಕ್ತವಾಗಿದೆ. ಉಸ್ತುವಾರಿ ಸಚಿವರ ಕಾರ್ಯಾಲಯ ಎಂಬುದು ಅಲಂಕಾರಕ್ಕಾಗಿ ಇರಬಾರದು ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News