ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಸಂದರ್ಭಗಳು ಹೆಚ್ಚುತ್ತಿವೆ: ಉಪಸಭಾಪತಿ ಧರ್ಮೇಗೌಡ ಆತಂಕ

Update: 2020-01-26 17:53 GMT

ಚಿಕ್ಕಮಗಳೂರು, ಜ.26: ಸಂವಿಧಾನ ನಮ್ಮನ್ನು ರಕ್ಷಿಸುತ್ತಾ ನಾವೆಲ್ಲರೂ ಸೌಹಾರ್ದದಿಂದ ಜಾತ್ಯತೀತವಾಗಿ, ನಿರ್ಭೀತವಾಗಿ ಬದುಕುವಂತೆ ಮಾಡಿದೆ. ಆದರೆ, ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವ ಸಂದರ್ಭಗಳು ಇತ್ತೀಚೆಗೆ ಹೆಚ್ಚುತ್ತಿವೆ ಎಂದು ವಿಧಾನ ಪರಿಷತ್ ಉಪಸಭಾಪತಿ ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್. ಧರ್ಮೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಡಿ.ಸಿ.ಸಿ ಬ್ಯಾಂಕ್ ಆವರಣದಲ್ಲಿ 71ನೇ ಗಣರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಉಂಟಾಗುತ್ತಿರುವ ಈ ಕಾಲಘಟ್ಟದಲ್ಲಿ ನಾವೆಲ್ಲರೂ ಸೇರಿ ಸಂವಿಧಾನವನ್ನು ರಕ್ಷಿಸುವ ಮತ್ತು ಅದರ ಆಶಯಗಳನ್ನು ಪಾಲಿಸುವ ಕಾರ್ಯ ಮಾಡ ಬೇಕಾಗಿದೆ ಎಂದು ಅವರು ಕಿವಿಮಾತು ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆಗಳು ಬರೀ ಆಚರಣೆಗಳಿಗೆ ಸೀಮಿತವಾಗದೇ ಅದರ ಗಂಭಿರತೆ ಹಾಗೂ ಆಶಯಗಳನ್ನು ನಿಜವಾಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳಾಬೇಕು. ಗಣರಾಜ್ಯೋತ್ಸವಾಚರಣೆಯ ಉದ್ದೇಶವನ್ನು ಯುವ ಪೀಳಿಗೆ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಎಲ್ಲರೂ ಸೇರಿ ಮಾಡಬೇಕೆಂದರು.

ಸಂವಿಧಾನದ ಆಶಯಗಳು ಅತ್ಯಂತ ಪವಿತ್ರವಾಗಿದೆ. ಅದು ನಮಗೆಲ್ಲರಿಗೂ ಜಾತಿ, ಧರ್ಮಗಳಿಗೆ ಅತೀತವಾಗಿ ಸಮಾನವಾದ ಹಕ್ಕು ಮತ್ತು ರಕ್ಷಣೆ ಒದಗಿಸಿಕೊಟ್ಟಿದೆ. ಆದರೆ, ಸಂವಿಧಾನವೇ ಅಪಾಯಕ್ಕೆ ಸಿಲುಕುವ ಸಂದರ್ಭಗಳು ಬಂದಾಗ ದೇಶದ ಜವಾಬ್ದಾರಿಯುತ ನಾಗರಿಕರಾದ ನಾವು ಸಂವಿಧಾನ ರಕ್ಷಣೆಯ ಜವಾಬ್ದಾರಿಯನ್ನು ಗಂಭೀರವಾಗಿ ನಿರ್ವಹಿಸಲು ಹಾಗೂ ಸಂವಿಧಾನದ ಮೂಲ ಉದ್ದೇಶಗಳಿಗೆ ಚ್ಯುತಿಯಾಗದಂತೆ ರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News