ದೇಶದ ಸಂವಿಧಾನ ಆಡಳಿತ ಪಕ್ಷಗಳ ಹುನ್ನಾರದಿಂದಾಗಿ ಆಪತ್ತಿನಲ್ಲಿದೆ: ಚಂದ್ರಪ್ಪ

Update: 2020-01-26 18:12 GMT

ಚಿತ್ರದುರ್ಗ, ಜ.26: ಸಂವಿಧಾನ ಆಪತ್ತಿನಲ್ಲಿರುವುದನ್ನು ದೇಶದ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಮಾಜಿ ಸಂಸದ ಬಿ.ಎನ್. ಚಂದ್ರಪ್ಪಆತಂಕ ವ್ಯಕ್ತಪಡಿಸಿದ್ದಾರೆ.

 ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ದೇಶದ 71 ನೇ ಗಣರಾಜ್ಯೊತ್ಸವದ ಅಂಗವಾಗಿ ಗಾಂಧಿ ಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ ಕೇಸರಿ ಸಂವಿಧಾನವನ್ನು ತರಲು ಹೊರಟಿದೆ. ಸಂವಿಧಾನಕ್ಕೆ ಕೈಮುಗಿಯುವ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ಷಾ ನಮಗೆ ಮುಸಲ್ಮಾನರು, ದಲಿತರು ಬೇಡ ಎಂದು ಹೇಳುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಕಿಡಿಕಾರಿದರು.

ಒಪ್ಪೊತ್ತಿನ ಕೂಳಿಗಾಗಿ ಪರಿತಪಿಸಿ ಮನುವಾದಿಗಳಿಂದ ತೊಂದರೆ ಅನುಭವಿಸುತ್ತಿರುವವರು ಬಿಜೆಪಿ ಪರ ಜೈಕಾರ ಹಾಕುತ್ತಿರುವುದು ಈ ದೇಶದ ದೊಡ್ಡ ದುರಂತ. ಎಲ್ಲಾ ಕೊಟ್ಟಿರುವ ಕಾಂಗ್ರೆಸ್ ಬೇಡ. ಏನು ಕೊಡದ ಬಿಜೆಪಿಬೇಕು ಎನ್ನುವ ಸ್ಥಿತಿಗೆ ಜನ ತಲುಪಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಸಿ.ಶಿವುಯಾದವ್, ಮಾಜಿ ಅಧ್ಯಕ್ಷ ಪಾತ್ಯರಾಜನ್, ಹಿರಿಯ ಉಪಾಧ್ಯಕ್ಷ ಶಬ್ಬೀರ್ ಅಹ್ಮದ್, ನಜ್ಮಾತಾಜ್, ಭೀಮುಸಮುದ್ರದ ಜಿ.ಎಸ್.ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ. ನಿರಂಜನಮೂರ್ತಿ, ಉಪಾಧ್ಯಕ್ಷ ಎನ್.ಬಿ.ಟಿ. ಝಮೀರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News