ಕೇರಳ: ಸಿಎಎ ವಿರುದ್ಧ ಮಾನವ ಸರಪಳಿ

Update: 2020-01-26 18:15 GMT

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಸರಕಾರದ ನೇತೃತ್ವದಲ್ಲಿ ರವಿವಾರ 620 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸುವ ಮೂಲಕ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ರದ್ದು ಪಡಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಲಾಗಿದೆ. ಮಾನವ ಸರಪಳಿ ರಚಿಸಿದ ಬಳಿಕ ‘ಸಂವಿಧಾನವನ್ನು ನಾಶಗೊಳಿಸುವ ಕೇಂದ್ರ ಸರಕಾರದ ಪ್ರಯತ್ನವನ್ನು’ ಖಂಡಿಸಲಾಯಿತು ಹಾಗೂ ಸಂವಿಧಾನವನ್ನು ರಕ್ಷಿಸುವ ಬಗ್ಗೆ ಪ್ರಮಾಣವಚನ ಸ್ವೀಕರಿಸಲಾಯಿತು. ಉತ್ತರ ಕೇರಳದ ಕಾಸರಗೋಡಿನಿಂದ ದಕ್ಷಿಣದ ಕೊಯಂಬತ್ತೂರು ಬಳಿಯ ಕಲಿಯಕ್ಕವಿಳೈ ಪಟ್ಟಣದವರೆಗಿನ 620 ಕಿ.ಮೀ. ಉದ್ದದ ಈ ಮಾನವ ಸರಪಳಿಗೆ ಸುಮಾರು 60ರಿಂದ 70 ಲಕ್ಷದಷ್ಟು ಜನತೆ ಕೈಜೋಡಿಸಿದ್ದರು ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಐ ಮುಖಂಡ ಕಣ್ಣಂ ರಾಜೇಂದ್ರನ್ ತಿರುವನಂತಪುರಂನಲ್ಲಿ ಮಾನವ ಸರಪಳಿಗೆ ಕೈಜೋಡಿಸಿದ್ದಾರೆ. ಬಳಿಕ ಸಂವಿಧಾನದ ಪೀಠಿಕೆಯನ್ನು ವಾಚಿಸಲಾಯಿತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor