ಸಿದ್ದರಾಮಯ್ಯ ಭೇಟಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

Update: 2020-01-27 12:47 GMT

ಬೆಂಗಳೂರು, ಜ.27: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ನಿನ್ನೆ ಹೊಟೇಲ್‌ನಲ್ಲಿ ಉಪಾಹಾರ ಸೇವಿಸಿದ ಸಂದರ್ಭದಲ್ಲಿ ನಡೆದ ಮಾತುಕತೆಗೆ ವಿಶೇಷ ಅರ್ಥ ಕಲ್ಪಿಸಬೇಡಿ ಎಂದು ಮಾಧ್ಯಮಗಳಿಗೆ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.

ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೊತೆ ಉಪಾಹಾರ ಸೇವಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಏನೇನೋ ಕಪೋಲಕಲ್ಪಿತ ಸುದ್ದಿಗಳು ಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಸುದ್ದಿಗಳನ್ನು ಮಾಡಿ. ನಿನ್ನೆ ಉಪಾಹಾರಕ್ಕೆ ತೆರಳುವ ವೇಳೆ ಸಿದ್ದರಾಮಯ್ಯ ಜೊತೆಗಿದ್ದರು ಅಷ್ಟೇ. ನಾವು ಈ ವೇಳೆ ರಾಜಕೀಯ ವಿಚಾರಗಳ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಆದರೂ, ಸುಮ್ಮನೆ ಏನೇನೋ ಊಹಿಸಿಕೊಂಡು ಸುದ್ದಿಗಳನ್ನು ಪ್ರಕಟಿಸಲಾಗಿದೆ. ಇದರಿಂದಾಗಿ, ನಮ್ಮ ನಡುವೆ ತಪ್ಪು ಭಾವನೆ ಉಂಟಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಸೂಕ್ತ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇಲ್ಲಿ ನಾವು ಎಷ್ಟೇ ಚರ್ಚೆಗಳು ಮಾಡಿದರೂ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ತೀರ್ಮಾನವೇ ಅಂತಿಮವಾಗಲಿದೆ. ಆದುದರಿಂದ, ಯಾರು ಆತಂಕಪಡುವ ಅಗತ್ಯವಿಲ್ಲ ಎಂದರು.

ಆಂಧ್ರದಲ್ಲಿ ಮಕ್ಕಳ ಆಟ: ಆಂಧಪ್ರದೇಶದಲ್ಲಿ ಮೇಲ್ಮನೆಯನ್ನು ರದ್ದು ಮಾಡುವ ಸಂಬಂಧ ಅಲ್ಲಿನ ಸರಕಾರ ಚಿಂತನೆ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಮೇಲ್ಮನೆಯನ್ನು ರದ್ದು ಮಾಡುವ ಅಧಿಕಾರ ರಾಜ್ಯ ಸರಕಾರಕ್ಕಿದೆ. ಆದರೆ, ಆಂಧ್ರಪ್ರದೇಶದಲ್ಲಿ ಇದು ಮಕ್ಕಳಾಟವಿದ್ದಂತಿದೆ ಎಂದರು.

ಈ ಹಿಂದೆ ಮೇಲ್ಮನೆಯನ್ನು ತೆಗೆದು ಹಾಕಿದ್ದರು. ನಂತರ ಪುನಃ ರಚನೆ ಮಾಡಿದರು. ಇದೀಗ ಮತ್ತೊಮ್ಮೆ ಮೇಲ್ಮನೆಯನ್ನು ತೆಗೆದು ಹಾಕಲು ಮುಂದಾಗಿದ್ದಾರೆ. ಮೇಲ್ಮನೆ ಎಂಬುದು ವಿಧಾನಸಭೆಯಲ್ಲಿ ಸೀಟು ಸಿಗದವರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಅಲ್ಲ, ವಿಧೇಯಕಗಳ ಬಗ್ಗೆ ಚರ್ಚೆಗೆ ಹೆಚ್ಚಿನ ಒತ್ತು ಕೊಡಲು ಎಂದು ಅವರು ಹೇಳಿದರು.

ಪ್ರೂಫ್ ರೀಡರ್ ರೀತಿಯಲ್ಲಿ ಮೇಲ್ಮನೆ ಕೆಲಸ ಮಾಡುತ್ತದೆ. ವಿಧೇಯಕಗಳಲ್ಲಿ ತಪ್ಪುಗಳಿದ್ದರೆ ಅದನ್ನು ಸರಿಪಡಿಸುವ ಕೆಲಸವನ್ನು ಮೇಲ್ಮನೆ ಮಾಡುತ್ತದೆ. ಯಾವುದಾದರೂ ಕಾನೂನು ತರಬೇಕಾದರೆ ಆಡಳಿತ ನಡೆಸುವವರು ಹೆಚ್ಚು ಗಂಭೀರವಾಗಿರಬೇಕಾಗುತ್ತದೆ. ಆದರೆ, ಇವತ್ತು ತರಾತುರಿಯಲ್ಲಿ ಕಾನೂನುಗಳನ್ನು ತರಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಸರಕಾರಕ್ಕೆ ಮೇಲ್ಮನೆಯಲ್ಲಿ ಸಲಹೆ ನೀಡಲು ಸಾಧ್ಯವಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ರಾಜ್ಯಸಭೆಯನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಬೇರೆಯದ್ದಾಗಿದ್ದರೆ ತೆಗೆದು ಹಾಕುತ್ತಿದ್ದರೇನೋ. ಆದರೆ, ರಾಜ್ಯ ಸರಕಾರಗಳಿಗೆ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿದೆ. ಆದುದರಿಂದ, ಮೇಲ್ಮನೆಗಳನ್ನು ತೆಗೆದು ಹಾಕುವುದು, ಪುನಃ ರಚನೆ ಮಾಡುವ ಪ್ರಕ್ರಿಯೆ ನಡೆಯುತ್ತಿರುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News