'ಮಿಣಿಮಿಣಿ ಪೌಡರ್' ಟ್ರೋಲ್ ಬಿಜೆಪಿಯವರ ವಿಕೃತ ಮನೋಭಾವಕ್ಕೆ ಸಾಕ್ಷಿ: ಕುಮಾರಸ್ವಾಮಿ

Update: 2020-01-27 13:51 GMT

ಬೆಂಗಳೂರು, ಜ. 27: ‘ಮಿಣಿ ಮಿಣಿ ಪೌಡರ್’ ಎಂಬ ನನ್ನ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವುದು ಬಿಜೆಪಿಯವರ ವಿಕೃತ ಮನೋಭಾವಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೆಂಗಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ವೈರಲ್ ಮಾಡುವ ಮೂಲಕ ಬಿಜೆಪಿಯವರು ತಮ್ಮ ಅಸಹ್ಯಕರ ಆಲೋಚನೆಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಟೀಕಿಸಿದರು.

ಮಂಗಳೂರಿನಲ್ಲಿ ಜ.19ರಂದು ಸ್ಫೋಟಕ ಪತ್ತೆ ಪ್ರಕರಣ ಸಂಬಂಧ ಪಟಾಕಿಗೆ ಬಳಸುವ ಮಿಣಿಮಿಣಿ ಪೌಡರ್ ಎಂದು ನಾನು ಹೇಳಿಕೆ ನೀಡಿದ್ದೆ. ನಾನು ನನ್ನ ಜೀವನದಲ್ಲಿ ಯಾವುದೇ ರೀತಿಯ ತಪ್ಪು ಮಾಡದೇ ಇರುವವನು. ತಪ್ಪು ಮಾಡಿದರೆ ಬಹಿರಂಗವಾಗಿ ಹೇಳುವವನು ನಾನು, ಅದರಲ್ಲಿ ನನಗೆ ಯಾವುದೇ ಅಂಜಿಕೆಯಿಲ್ಲ ಎಂದರು.

ನನ್ನ ಬಗ್ಗೆ ಕೀಳುಮಟ್ಟದಲ್ಲಿ ಅವರು ಕೆಲ ವಿಡಿಯೋ ವೈರಲ್ ಮಾಡಿಕೊಂಡು ಹೊರಟಿದ್ದಾರೆ. ಅವರ ಕೀಳು ಅಭಿರುಚಿಗೆ ಸಾಕ್ಷಿ. ಅವರ ಭಾವನೆಗಳೇನು? ಬಿಜೆಪಿ ಪಕ್ಷದ ಸಂಸ್ಕೃತಿ ಏನು ಅದನ್ನು ವ್ಯಕ್ತಪಡಿಸಿದ್ದಾರೆಂದ ಅವರು, ಅವರಿಗೆ ಸಂತೋಷ ಆಗುವುದಾದರೆ ಮಾಡಿಕೊಳ್ಳಲಿ ಎಂದರು.

ಸ್ಫೋಟಕ ಬೆಳಗ್ಗೆ 9 ಗಂಟೆಗೆ ಪತ್ತೆಯಾಗಿತ್ತು. ಆದರೆ, ಸಂಜೆ 6ಗಂಟೆಯ ವರೆಗೆ ಸಜೀವ ಬಾಂಬ್ ಪತ್ತೆ ಎಂದು ಮಾಧ್ಯಮಗಳನ್ನು ದಾರಿ ತಪ್ಪಿಸಿದರು. ಇದರಿಂದ ಜನರ ಮೇಲೆ ಆಗುವ ಪರಿಣಾಮ ಎಂತಹದ್ದು ಎಂದು ಪ್ರಶ್ನಿಸಿದ ಅವರು, ಸರಕಾರ ಏನು ಸಂದೇಶ ನೀಡಲು ಹೊರಟಿದೆ ಎಂದು ಟೀಕಿಸಿದರು.

ಸ್ಫೋಟಕ ಇಟ್ಟ ವ್ಯಕ್ತಿ ಡಿಜಿಪಿ ಮುಂದೆ ಶರಣಾದ ಕೂಡಲೇ ಸ್ಥಳೀಯ ಅಧಿಕಾರಿಗಳು ಯಾವ ಪೌಡರ್ ಎಂದು ಹೇಳಿದ್ದಾರೆ. ನಾನು ಕತೆ ಕಟ್ಟುವ ವ್ಯಕ್ತಿಯಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡುವೆ. ಹುಡುಗಾಟಿಕೆಯಿಂದ ಸರಕಾರ ನಡೆಸಲು ಆಗುವುದಿಲ್ಲ, ಜವಾಬ್ದಾರಿ ಇರಬೇಕು. ಜನರಲ್ಲಿ ಭೀತಿ ಸೃಷ್ಟಿಸಲು ಅಷ್ಟು ದೊಡ್ಡ ನಾಟಕದ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News