'ಸೋತ ಅಭ್ಯರ್ಥಿಗಳಿಗೆ ಸಚಿವ ಸ್ಥಾನ'ದ ಬಗ್ಗೆ ಆರ್.ಅಶೋಕ್ ಹೇಳಿದ್ದು ಹೀಗೆ...

Update: 2020-01-27 13:03 GMT

ಬೆಂಗಳೂರು, ಜ.27: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟ ವಿಸ್ತರಿಸಲಿದ್ದು, ಉಪ ಚುನಾವಣೆಯಲ್ಲಿ ಸೋತವರನ್ನು ಮಂತ್ರಿ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸೋಮವಾರ ಇಲ್ಲಿನ ಬಸವನಗುಡಿ ಮೈದಾನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸೋತವರಿಗೆ ಯಾವ ಸ್ಥಾನದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ಹಿರಿಯರು ನಿರ್ಧಾರ ಕೈಗೊಳ್ಳಲಿದ್ದಾರೆ. ಅದೇ ರೀತಿ, ಸುಪ್ರೀಂ ಕೋರ್ಟ್ ಆದೇಶ, ಕಾನೂನು ತೊಡಕು ಎಲ್ಲವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗುವುದು ಎಂದರು.

ಬಿಜೆಪಿ ಸಹವಾಸ ಮಾಡಿದವರು ಯಾರೂ ಅತಂತ್ರರಾಗಿಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಅತಂತ್ರವಾಗಿದ್ದಾರೆ. ಕಾಂಗ್ರೆಸ್‌ನಿಂದ ಅವರಿಗೆ ಗೇಟ್ ಪಾಸ್ ಕೊಡಬಹುದು. ಅದಕ್ಕೆ ವಕೀಲಿಕೆ ಪುನರಾಂಭಿಸಲು ಮುಂದಾಗಿದ್ದಾರೆ. ಅಲ್ಲದೆ, ಮೈಸೂರಿನಲ್ಲಿ ಫ್ರೀ ಕಾಶ್ಮೀರ್ ಫಲಕ ಹಿಡಿದುಕೊಂಡು ಘೋಷಣೆ ಕೂಗಿದವರ ಪರ ವಕಾಲತ್ತು ವಹಿಸಲು ಸಿದ್ದರಾಮಯ್ಯ ಮುಂದಾಗಿದ್ದು, ಅವರು ಪಾಕಿಸ್ತಾನದ ಪರ ಇದ್ದಾರೋ ಎಂದು ಪ್ರಶ್ನಿಸಿದರು.

ಮಾಧುಸ್ವಾಮಿ ಅವರು ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷದ ಮಟ್ಟದಲ್ಲಿ ಈ ರೀತಿಯ ಚರ್ಚೆಗಳಾಗಿಲ್ಲ ಎಂದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಭಾರತದಿಂದ ಸಂವಿಧಾನ ತೆಗೆಯಲು ಆರೆಸ್ಸೆಸ್ ಸಂಚು ನಡೆಸಿದೆ ಎಂದು ಆರೋಪಿಸಿದ್ದಾರೆ. ಸಂವಿಧಾನ ಉಳಿಸಿ ಎಂದು ಕರೆ ಕೊಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ.

ಇನ್ನು, ಕೆಪಿಸಿಸಿ ಅಧ್ಯಕ್ಷ ಸ್ಥಾನ, ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಹಾಗೂ ವಿರೋಧ ಪಕ್ಷದ ನಾಯಕರ ಸ್ಥಾನ ಎಲ್ಲವೂ ಖಾಲಿ ಇದೆ. ಎರಡು, ಮೂರು ತಿಂಗಳಾದರೂ ಇದಕ್ಕೆ ಯಾರನ್ನು ಆಯ್ಕೆ ಮಾಡಲಾಗಿಲ್ಲ. ಮುಂದಾದರೂ ಕಾಂಗ್ರೆಸ್‌ನವರು ಸಂವಿಧಾನ ಉಳಿಸಿ ಎನ್ನುವ ಬದಲು ಕಾಂಗ್ರೆಸ್ ಉಳಿಸಿ ಎನ್ನಲಿ ಎಂದು ಲೇವಡಿ ಮಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News