ಡಿಕೆಶಿ ಬಂಧನ ಖಂಡಿಸಿ ನಡೆದ ಬಂದ್ ನಿಂದ ಆದ ನಷ್ಟ ಎಷ್ಟು ಕೋಟಿ ರೂ. ಗೊತ್ತೇ ?

Update: 2020-01-27 17:11 GMT

ಬೆಂಗಳೂರು, ಜ.27: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಡೆಸಲಾದ ಬಂದ್ ವೇಳೆ ಉಂಟಾದ ಹಾನಿಗೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ 82 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ ಹಾಗೂ 19 ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಹೈಕೋರ್ಟ್‌ಗೆ ಅಡ್ವೋಕೆಟ್ ಜನರಲ್ ಪ್ರಭುಲಿಂಗ್ ನಾವದಗಿ ಹೇಳಿಕೆ ನೀಡಿದರು. 

ಈ ಕುರಿತು ರವಿಕುಮಾರ್ ಕಂಚನಹಳ್ಳಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಬಂದ್ ವೇಳೆ ಉಂಟಾದ ನಷ್ಟವನ್ನು ಅಂದಾಜಿಸಲು ಸಮಿತಿಗೆ ಸಿಬ್ಬಂದಿ ನೇಮಿಸಲಾಗುವುದು. ಸುಪ್ರೀಂಕೋರ್ಟ್ ಸೂಚನೆಯಂತೆ ಸಮಿತಿ ರಚನೆ ಮಾಡಲಾಗುವುದು ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ 3 ವಾರಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ದಂಗೆಯಲ್ಲಿ ನಿರತರಾಗಿದ್ದ 40 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೀಠಕ್ಕೆ ಅಡ್ವೋಕೆಟ್ ಜನರಲ್ ಅವರು ಮಾಹಿತಿ ನೀಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಫೆ.3ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News