ಕೈದಿಗಳ ಅಸಹಜ ಸಾವು ಪ್ರಕರಣ: ಪರಿಹಾರ ನೀಡಲು ಸಕ್ಷಮ ಪ್ರಾಧಿಕಾರ ನೇಮಿಸಿ- ಹೈಕೋರ್ಟ್ ನಿರ್ದೇಶನ

Update: 2020-01-27 17:41 GMT

ಬೆಂಗಳೂರು, ಜ.27: ಕಾರಾಗೃಹಗಳಲ್ಲಿನ ಕೈದಿಗಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕೈದಿಗಳ ಕುಟುಂಬಕ್ಕೆ ಮಧ್ಯಂತರ ಪರಿಹಾರ ನೀಡಲು ಜಿಲ್ಲಾಧಿಕಾರಿಗಳನ್ನು ಸಕ್ಷಮ ಪ್ರಾಧಿಕಾರವನ್ನಾಗಿ ನೇಮಕ ಮಾಡಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಕಾರಾಗೃಹಗಳಲ್ಲಿನ ಅಸಹಜ ಸಾವು ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸುಪ್ರೀಂಕೋರ್ಟ್ 2017ರ ಸೆ.15ರಂದು ದೇಶದಲ್ಲಿ 2012ರಿಂದ 2015ರ ನಡುವಿನ ಅವಧಿಯಲ್ಲಿ 1382 ಕಾರಾಗೃಹಗಳಲ್ಲಿ 500 ಕ್ಕೂ ಅಧಿಕ ಕೈದಿಗಳು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದನ್ನು ಪರಿಗಣಿಸಿ, ಇಂತಹ ಸಾವುಗಳನ್ನು ತಡೆಯಲು ಮತ್ತು ಕೈದಿಗಳ ಅಸಹಜ ಸಾವುಗಳಿಂದ ಸಂತ್ರಸ್ತವಾಗುವ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಸರಕಾರಗಳಿಗೆ ಆದೇಶ ನೀಡಿತ್ತು. 2012ರ ಜನವರಿಯಿಂದ 2017ರ ಅಕ್ಟೋಬರ್‌ವರೆಗೆ ಒಟ್ಟು 48 ಮಂದಿ ಕೈದಿಗಳು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವುಗಳಲ್ಲಿ 21 ಪ್ರಕರಣಗಳು ಬಾಕಿ ಇವೆ. 26 ಪ್ರಕರಣಗಳು ಈಗಾಗಲೇ ಇತ್ಯರ್ಥವಾಗಿವೆ. ಬೆಂಗಳೂರಿನ ಕೈದಿ ಮಂಜುನಾಥ್ ಕುಟುಂಬಕ್ಕೆ 2016ರಲ್ಲಿ 5 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಸರಕಾರ ನ್ಯಾಯಪೀಠಕ್ಕೆ ತಿಳಿಸಿತ್ತು. 2012ರಲ್ಲಿ 9, 2013ರಲ್ಲಿ 3, 2014ರಲ್ಲಿ 15, 2016ರಲ್ಲಿ 9, 2016ರಲ್ಲಿ 5 ಹಾಗೂ 2017ರಲ್ಲಿ 7 ಪ್ರಕರಣಗಳು ನಡೆದಿವೆ. ಇದಲ್ಲದೆ, ಇದೇ ಅವಧಿಯಲ್ಲಿ 59 ಮಂದಿ ಕೈದಿಗಳು ಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದೂ ಸರಕಾರ ಪೀಠಕ್ಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News