ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ಪ್ಲಾಜಾದ ಸುತ್ತಮುತ್ತಲಿನವರಿಗೆ ರಿಯಾಯಿತಿ ಘೋಷಣೆ

Update: 2020-01-27 17:45 GMT

ಬೆಂಗಳೂರು, ಜ.27: ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ಪ್ಲಾಜಾದ ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಟೋಲ್ ಶುಲ್ಕದಲ್ಲಿ ರಿಯಾಯಿತಿ ನೀಡಿದ್ದು, ಫಾಸ್ಟಾಗ್ ಮೂಲಕ ಟೋಲ್ ಶುಲ್ಕ ಪಾವತಿಲು ಮಾಸಿಕ ಪಾಸ್ ವ್ಯವಸ್ಥೆ ಮಾಡಲಾಗಿದೆ.

ದೇಶದಾದ್ಯಂತ ಫಾಸ್ಟಾಗ್ ಕಡ್ಡಾಯ ನಿಯಮ ಜಾರಿಯಾದ ನಂತರ ಸ್ಥಳೀಯ ನಿವಾಸಿಗಳಿಗೆ ರಿಯಾಯಿತಿ ಸಿಗುತ್ತಿಲ್ಲ ಎಂಬ ಆರೋಪವಿತ್ತು. ಈ ಹಿಂದೆ ಯಾವುದೇ ವಾಹನ 1 ಟೋಲ್‌ನಲ್ಲಿ ಹೋಗಿ, 24 ಗಂಟೆಯೊಳಗೆ ಮತ್ತೇ ಅದೇ ಟೋಲ್‌ನಲಿ ವಾಪಸ್ಸು ಬಂದರೆ ರಿಯಾಯಿತಿ ಸಿಗುತ್ತಿತ್ತು. ಈ ಫಾಸ್ಟಾಗ್ ಬಂದ ಬಳಿಕ ಅದು ಸಿಗುತ್ತಿರಲಿಲ್ಲ ಎಂದು ಅಪವಾದವಿತ್ತು. ಇದನ್ನು ಸರಿಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದೇ ಟೋಲ್‌ನಲ್ಲಿ 24 ಗಂಟೆಯೊಳಗೆ ಹೋಗಿ ವಾಪಸ್ ಬರುವವರಿಗೆ ತನ್ನಿಂದ ತಾನೇ ರಿಯಾಯಿತಿ ದೊರೆಯುವಂತ ವ್ಯವಸ್ಥೆ ಮಾಡಿದೆ. ಟೋಲ್‌ಗೇಟ್‌ಗಳಿಂದ 20 ಕಿ.ಮೀ.ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ರಿಯಾಯಿತಿ ಸೇವೆ ನೀಡಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

20 ಕಿ.ಮೀ.ಗೆ 300 ರೂ.: ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್‌ಗೇಟ್‌ಗಳ ಸುತ್ತಮುತ್ತಲಿನ ಗ್ರಾಮಗಳ ವಾಹನಗಳಿಗೆ ರಿಯಾಯಿತಿ ನೀಡುತ್ತಿಲ್ಲ ಎಂಬ ಅಪವಾದಗಳಿಗೆ ಕಡಿವಾಣ ಹಾಕಲಾಗಿದೆ. ಇದೀಗ ಟೋಲ್‌ಪ್ಲಾಜಾಗಳ 20 ಕಿ.ಮೀ ವ್ಯಾಪ್ತಿಯಲ್ಲಿನ ನಿವಾಸಿಗಳು 300 ರೂ. ಪಾವತಿಸಿ ಮಾಸಿಕ ಪಾಸ್ ಪಡೆದುಕೊಳ್ಳಬಹುದು. ಅದೇ ರೀತಿ 10 ಕಿ.ಮೀ.ವ್ಯಾಪ್ತಿಯೊಳಗಿನವರು 150 ನೀಡಿ ಮಾಸಿಕ ಪಾಸ್ ಪಡೆಯಬಹುದಾಗಿದೆ.

ಮಾಸಿಕ ಪಾಸ್ ಖರೀದಿ ಮಾಡಿದವರು ಎಷ್ಟು ಬಾರಿಯಾದರೂ ಟೋಲ್ ಪ್ಲಾಜಾಗಳಲ್ಲಿ ಸಂಚಾರ ಮಾಡಬಹುದಾಗಿದೆ. ಫಾಸ್ಟಾಗ್ ಪಥದಲ್ಲಿಯೇ ಸಂಚಾರ ಮಾಡಬೇಕಿರುವುದು ಕಡ್ಡಾಯವಾಗಿರುವುದರಿಂದ ಮೊದಲು ಫಾಸ್ಟಾಗ್ ಐಡಿಯಿಂದಲೇ ಶುಲ್ಕ ಕಡಿತವಾಗಲಿದೆ. ಬಳಿಕ ಕ್ಯಾಷ್‌ಬ್ಯಾಕ್ ರೂಪದಲ್ಲಿ ವಾಹನಗಳ ಫಾಸ್ಟಾಗ್ ಖಾತೆಗೆ ಹಣ ಮರುಪಾವತಿಯಾಗಲಿದೆ.

ಆನ್‌ಲೈನ್ ನೋಂದಣಿ: ಮಾಸಿಕ ಪಾಸ್ ಪಡೆಯುವವರು ಟೋಲ್‌ಪ್ಲಾಜಾಗಳಿಂದ 10-20 ಕಿ.ಮೀ.ವ್ಯಾಪ್ತಿಯಲ್ಲಿಯೇ ಇರಬೇಕು. ಈ ಸಂಬಂಧ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಫಾಸ್ಟಾಗ್ ಐಡಿ ಪಡೆಯಬೇಕಾಗಿದೆ. ಈಗಾಗಲೇ ಫಾಸ್ಟಾಗ್ ಐಡಿ ಪಡೆದಿದ್ದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೆಬ್‌ಸೈಟ್‌ಗೆ ತೆರಳಿ ಮಾಸಿಕ ಪಾಸ್ ಕುರಿತಂತೆ ಐಡಿ ಮತ್ತು ವಾಹನದ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದು.

ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟಾಗ್‌ಗೆ ಸಂಬಂಧಿಸಿದಂತೆ ನಿಗದಿ ಮಾಡಿರುವ ಟೋಲ್‌ಫ್ರೀ ಸಸಂಖ್ಯೆ 1800 102 6480 ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಈ ವಿಷಯದಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಶುಲ್ಕ ರಹಿತ ಸಂಖ್ಯೆ 1033 ಕರೆ ಮಾಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News