ಸಾರಿಗೆ ನೌಕರರನ್ನು ಸರಕಾರಿ ನೌಕರರಾಗಿ ಪರಿಗಣಿಸಲು ಆಗ್ರಹಿಸಿ ಧರಣಿ

Update: 2020-01-27 17:55 GMT

ಬೆಂಗಳೂರು, ಜ. 27: ಸಾರಿಗೆ ನೌಕರರನ್ನು ಸರಕಾರಿ ನೌಕರರು ಎಂದು ಪರಿಗಣಿಸಬೇಕೆಂದು ಒತ್ತಾಯಿಸಿ ಬಿಎಂಟಿಸಿ, ಕೆಎಸ್ಸಾರ್ಟಿಸಿ ಹಾಗೂ ಈಶಾನ್ಯ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನೌಕರರಿಂದು ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ನಗರದ ಸ್ವಾತಂತ್ರ ಉದ್ಯಾನವನದಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ನೌಕರರು ಪಾಲ್ಗೊಂಡು, ರಾಜ್ಯ ಸರಕಾರ ಕೂಡಲೇ ಈ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರ ಸೇವೆ ಮಾಡುವಂತ ಸಾರ್ವಜನಿಕ ಸಂಸ್ಥೆಗಳಲ್ಲಿ ಸಾರಿಗೆ ಇಲಾಖೆ ಒಂದಾಗಿದೆ. ನೇರವಾಗಿ ಸಾರ್ವಜನಿಕರಿಗೆ ತಲುಪುವ, ಸಹಾಯವಾಗುವ ರೀತಿಯಲ್ಲಿ ಸರಕಾರಿ ಬಸ್‌ಗಳ ಚಾಲಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಎಲ್ಲ ನೌಕರರಂತೆ ಈ ನೌಕರರನ್ನಾಗಿ ಸರಕಾರಿ ನೌಕರರು ಎಂದು ಪರಿಗಣಿಸದೆ ಇರುವುದು ಸರಿಯಲ್ಲ. ಸಾರ್ವಜನಿಕರಿಗೆ ನೇರವಾಗಿ ಸಹಕರಿಸುವ ಸಿಬ್ಬಂದಿಗಳನ್ನು ಸರಕಾರಿ ನೌಕರರು ಎಂದು ಪರಿಗಣಿಸಿ ಸಾರ್ವಜನಿಕರ ಸೇವೆಗೆ ಅನುಕೂಲ ಮಾಡಿಕೋಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಹಿರಿಯ ಸಿಬ್ಬಂದಿ ಹಾಗೂ ಸಂಘದ ಮುಖಂಡ ರಾಜೇಂದ್ರ ಶೆಟ್ಟರ್, ಬರೋಬ್ಬರಿ 21 ವರ್ಷಗಳ ಕಾಲ ವಾಯವ್ಯ ಭಾಗದಲ್ಲಿ ನಿರ್ವಾಹಕ ಜೊತೆಗೆ ಚಾಲಕನೂ ಆಗಿದ್ದೇನೆ. ಕೆಲವೊಮ್ಮೆ ರಜೆಯೂ ದೊರೆಯುವುದಿಲ್ಲ. ಹೊರಗಡೆ, ಶೌಚಾಲಯ ಸೇರಿದಂತೆ ಯಾವುದೇ ರೀತಿಯ ಮೂಲ ಸೌಕರ್ಯ ಇರುವುದಿಲ್ಲ. ಆದರೂ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಆರಂಭಿಸಿರುವ ನೇಮಕಾತಿ ಪ್ರಕ್ರಿಯೆ ರದ್ದು ಮಾಡಿ ಅಂತರ ನಿಗಮ ವರ್ಗಾವಣೆ ಪೂರ್ಣಗೊಳಿಸಬೇಕು. ಮುಂತಾದ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸುವಂತೆ ಆಗಲಿ ಎಂದು ಅವರು ಮನವಿ ಮಾಡಿದರು.

ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ ಮಾತನಾಡಿ, ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಹಗಲು-ರಾತ್ರಿ ಎನ್ನದೇ ಜನರ ಸೇವೆಗಾಗಿ ದುಡಿಯುತ್ತಿದ್ದಾರೆ. ಆದರೆ, ಸರಕಾರಗಳು ಈ ನೌಕರರನ್ನು ಖಾಯಂ ನೌಕರರನ್ನಾಗಿ ಮಾಡಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಸಮ್ಮಿಶ್ರ ಸರಕಾರವಿದ್ದಾಗಲೂ ನಾವು ಹಲವು ಬಾರಿ ಅಂದಿನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೆವು. ಈ ಸಂಬಂಧ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದ್ದರು. ಆದರೆ, ಅದನ್ನು ಕಾರ್ಯಗತಗೊಳಿಸಲಿಲ್ಲ. ಆದುದರಿಂದಾಗಿ, ಇಂದಿನ ಸಿಎಂ ಕೂಡಲೇ ಈ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಾರಿಗೆ ನೌಕರರನ್ನು ಸರಕಾರಿ ನೌಕರರು ಎಂದು ಪರಿಗಣಿಸಿ, ಎಲ್ಲ ಸೌಲಭ್ಯಗಳನ್ನು ನೀಡಬೇಕು. ಚಾಲಕ ಕಂ ನಿರ್ವಾಹಕರ ಹುದ್ದೆಗಳನ್ನು ಭರ್ತಿ ಮಾಡಲು ವಾಯವ್ಯ ಸಾರಿಗೆ ನಿಗಮ ಹೊರಡಿಸಿರುವ ಅಧಿಸೂಚನೆ ರದ್ದು ಪಡಿಸಬೇಕು. ಈಗಾಗಲೇ ಒಂದು ಹಂತದ ಅಂತರ ವಲಯ ವರ್ಗಾವಣೆ ನಡೆದಿದೆ ಎಂದರು.

ಬಿಎಂಟಿಸಿ ಮತ್ತು ಕೆಎರ್ಸ್ಸಾಟಿಸಿಯಲ್ಲಿ ಕೆಲಸ ಮಾಡುತ್ತಿರುವ ಉತ್ತರ ಕರ್ನಾಟಕ ಭಾಗದ ಅಂದಾಜು 2,800 ನೌಕರರು ಅಂತರ ವಲಯ ವರ್ಗಾವಣೆಗಾಗಿ ಕಾಯುತ್ತಿದ್ದಾರೆ. ಅವರ ವರ್ಗಾವಣೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

ಸರಕಾರಿ ನೌಕರರಂತೆ ನಮಗೂ ಪಿಂಚಣಿ ದೊರೆಯುವಂತಾಗಬೇಕು. ಕರ್ತವ್ಯದ ನಿರ್ವಹಿಸುವಾಗ ಮರಣ ಹೊಂದಿದ ಸಿಬ್ಬಂದಿಗೆ 30 ಲಕ್ಷ ರೂ. ಪರಿಹಾರ ನೀಡಬೇಕು. ಪೊಲೀಸ್ ಇಲಾಖೆಯಲ್ಲಿರುವ ತೆರಿಗೆ ಮುಕ್ತ ಜನರಲ್ ಸ್ಟೋರ್ ರೀತಿಯಲ್ಲಿ ಸಾರಿಗೆಯಲ್ಲಿ ವಿಭಾಗಕ್ಕೊಂದು ತೆರೆಯಬೇಕು. ಆರೋಗ್ಯ ಸಂಜಿವಿನಿ ಭಾಗ್ಯ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನೌಕರರ ಒಕ್ಕೂಟದ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ರಾಜ್ಯ ಸಂಚಾಲಕ ಶೌಖತ್ ಅಲಿ ಸೇರಿದಂತೆ ಕೆಎಸ್ಸಾರ್ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ಸಂಸ್ಥೆ ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳ ನೂರಾರು ನೌಕರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News